ವಾರಾಣಾಸಿ:ಇಲ್ಲಿನ ಗಂಗಾನದಿಯಲ್ಲಿ ಬೋಟ್ ಮಗುಚಿದ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಜೀವಹಾನಿಯಾಗಿಲ್ಲ. ಇಂದು ಬೆಳಗ್ಗೆ ಇಲ್ಲಿನ ದಶಶ್ವಮೇಧ ಘಾಟ್ನಲ್ಲಿ 34 ಮಂದಿ ಆಂಧ್ರಪ್ರದೇಶದ ಭಕ್ತಾದಿಗಳು ನದಿಯಲ್ಲಿ ಪ್ರಯಾಣ ಮಾಡುವಾಗ ಬೋಟ್ ಮಗುಚಿಕೊಂಡಿದೆ. ಎಲ್ಲಾ ಯಾತ್ರಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದೋಣಿ ಮಗುಚಿಕೊಂಡ ತಕ್ಷಣ ಈಜುಪಟುಗಳು ತಕ್ಷಣಕ್ಕೆ ನೀರಿಗೆ ಹಾರಿ ಭಕ್ತಾದಿಗಳ ಪ್ರಾಣ ಉಳಿಸಿದ್ದಾರೆ. ವಿಷಯ ತಿಳಿದು ಸ್ಥಳೀಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಬಂದಿದ್ದು, ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದರು. 34 ಯಾತ್ರಿಕರು ಎಪಿಯ ಪೂರ್ವ ಗೋದಾವರಿಯಿಂದ ಬಂದಿದ್ದರು. ನದಿಯಿಂದ ರಕ್ಷಿಸಲ್ಪಟ್ಟ ನಂತರ ಇಬ್ಬರು ಯಾತ್ರಾರ್ಥಿಗಳು ಅಸ್ವಸ್ಥರಾಗಿದ್ದು, ಅವರನ್ನು ಕಬೀರಚೌರಾದ ವಿಭಾಗೀಯ ಆಸ್ಪತ್ರೆಗೆ ರವಾನಿಸಲಾಗಿದೆ.