ಪಾಟ್ನಾ(ಬಿಹಾರ) : ಮಕ್ಕಳು ಪ್ರಯಾಣಿಸುತ್ತಿದ್ದ ದೋಣಿ ಮುಳುಗಡೆಯಾಗಿರುವ ಘಟನೆ ಬಿಹಾರದ ಮುಜಾಫರ್ ಜಿಲ್ಲೆಯ ಬಾಗಮತಿ ನದಿಯಲ್ಲಿ ಇಂದು ನಡೆದಿದೆ. ಸುಮಾರು 30 ಮಕ್ಕಳು ದೋಣಿಯಲ್ಲಿ ಪ್ರಯಾಣಿಸುತ್ತಿದ್ದರು. ಇದುವರೆಗೂ 20 ಮಕ್ಕಳನ್ನು ರಕ್ಷಣೆ ಮಾಡಲಾಗಿದ್ದು, ಉಳಿದ ಮಕ್ಕಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಮಕ್ಕಳನ್ನು ಸಾಗಿಸುತ್ತಿದ್ದ ದೋಣಿ ಮುಳುಗಡೆ : ಇಲ್ಲಿನ ಮುಜಾಫರ್ನಗರದ ಬೆನೀವಾದ್ ವ್ಯಾಪ್ತಿಯ ಮಧುರಪಟ್ಟಿ ಘಾಟ್ನಲ್ಲಿ ದೋಣಿ ಮುಳುಗಡೆಯಾಗಿದೆ. ಈ ದೋಣಿಯಲ್ಲಿ ಶಾಲಾ ಮಕ್ಕಳು ಮಾತ್ರ ಇದ್ದರು. ದೋಣಿ ಅಪಘಾತದ ಸುದ್ದಿ ತಿಳಿದು ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ವೇಳೆ ದೋಣಿಯಲ್ಲಿದ್ದ ಕೆಲ ಮಕ್ಕಳು ಈಜಿ ದಡವನ್ನು ಸೇರಿದ್ದಾರೆ. ಆದರೆ 10 ಮಕ್ಕಳು ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಸ್ಥಳದಲ್ಲಿ ಬೆನೀವಾದ್ ಪೊಲೀಸರು, ಎಸ್ಡಿಆರ್ಎಫ್ ಮತ್ತು ಎನ್ಡಿಆರ್ಎಫ್ ತಂಡಗಳು ಆಗಮಿಸಿ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಅಲ್ಲದೆ ಸ್ಥಳಕ್ಕೆ ಮುಳುಗುತಜ್ಞರು ಆಗಮಿಸಿದ್ದಾರೆ.
ತನಿಖೆಗೆ ಆದೇಶಿಸಿದ ಸಿಎಂ ನಿತೀಶ್ ಕುಮಾರ್ : ಪ್ರಕರಣದ ಬಗ್ಗೆ ತನಿಖೆ ನಡೆಸಲು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ಸೂಚಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಿತೀಶ್ ಕುಮಾರ್, ಮುಜಾಫರ್ ದೋಣಿ ಅಪಘಾತ ಸಂಬಂಧ ತನಿಖೆ ನಡೆಸಲು ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ಆದೇಶ ನೀಡಿದ್ದೇನೆ. ಅವರು ಈ ಸಂಬಂಧ ಪರಿಶೀಲನೆ ನಡೆಸುತ್ತಾರೆ. ಸಂತ್ರಸ್ತ ಕುಟುಂಬಕ್ಕೆ ನೆರವು ನೀಡಲಾಗುವುದು ಎಂದು ತಿಳಿಸಿದ್ದಾರೆ.