ಛಪ್ರಾ (ಬಿಹಾರ): ಬಿಹಾರದ ಛಪ್ರಾದಲ್ಲಿ ದೋಣಿ ಮಗುಚಿ ನಾಲ್ವರು ಸಾವನ್ನಪ್ಪಿದ್ದು 15 ಜನ ಕಾಣೆಯಾಗಿರುವ ಘಟನೆ ನಡೆದಿದೆ. ಇಲ್ಲಿಯ ಸರಯೂ ನದಿಯಲ್ಲಿ 15ಕ್ಕೂ ಹೆಚ್ಚಿನ ಪ್ರಯಾಣಿಕರು ತುಂಬಿದ್ದ ದೋಣಿ ಪಲ್ಟಿಯಾಗಿದೆ. ಈ ಘಟನೆಯಲ್ಲಿ ಇದುವರೆಗೆ ನಾಲ್ವರ ಮೃತದೇಹಗಳು ಪತ್ತೆಯಾಗಿವೆ. ಇನ್ನೂ 14 ಮಂದಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಕೆಲವರು ಈಜಿ ದಡ ಸೇರಿದ್ದಾರೆ. ಮಾಂಝಿ ಪೊಲೀಸ್ ಠಾಣೆ ವ್ಯಾಪ್ತಿಯ ಮಥಿಯಾರ್ ಎಂಬಲ್ಲಿ ಈ ಘಟನೆ ನಡೆದಿದೆ. ನಾಪತ್ತೆಯಾಗಿರುವವರ ಪತ್ತೆಗಾಗಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಹೊಲದಲ್ಲಿ ಕೆಲಸ ಮುಗಿಸಿ ದೋಣಿಯಲ್ಲಿ ವಾಪಸಾಗುತ್ತಿದ್ದ ರೈತರು: ರೈತರು ಹಾಗೂ ಕೂಲಿ ಕಾರ್ಮಿಕರು ಹೊಲದಲ್ಲಿ ಕೆಲಸ ಮಾಡಲು ತೆರಳಿ ಸಂಜೆ ಸಮಯ ದೋಣಿಯಲ್ಲಿ ವಾಪಸ್ ಆಗುತ್ತಿದ್ದರು ಈ ವೇಳೆ ದುರ್ಘಟನೆ ಸಂಭವಿಸಿದೆ. ದೋಣಿ ಮಗುಚಿದ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸ್ ಪಡೆ ಮತ್ತು ಸಮೀಪದ ಗ್ರಾಮಗಳ ಜನರು ಘಟನಾ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ತಂಡಗಳೂ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಘಟನಾ ಸ್ಥಳದಲ್ಲೇ ಎಸ್ಪಿ ಮೊಕ್ಕಾಂ ಹೂಡಿದ್ದಾರೆ.
ಮೃತರ ಗುರುತು ಪತ್ತೆ:ಘಟನೆಯಲ್ಲಿ ಮೃತಪಟ್ಟವರ ಗುರುತು ಪತ್ತೆಹಚ್ಚಲಾಗಿದೆ. ಫೂಲ್ ಕುಮಾರಿ ದೇವಿ, ತಾರಾ ದೇವಿ, ರಮಿತಾ ಕುಮಾರಿ, ಪಿಂಕಿ ಕುಮಾರಿ ಮೃತರು. ಕಾಣೆಯಾದವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.