ನವದೆಹಲಿ:ದ್ವಿಪಕ್ಷೀಯ ಸಂಬಂಧ, ಅಫ್ಘಾನಿಸ್ತಾನದ ಪ್ರಾದೇಶಿಕ ಸಮಸ್ಯೆಗಳು, ಪಾಕ್ ಪ್ರಾಯೋಜಿತ ಭಯೋತ್ಪಾದನೆ, ಇಂಡೋ ಪೆಸಿಫಿಕ್ ಸೇರಿದಂತೆ ಇತರ ವಿಷಯಗಳ ಬಗ್ಗೆ ಚರ್ಚಿಸಲು ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕೆನ್ ಇಂದಿನಿಂದ ಎರಡು ದಿನಗಳ ಕಾಲ ಭಾರತದ ಪ್ರವಾಸ ಕೈಗೊಂಡಿದ್ದಾರೆ.
ಅಧಿಕಾರ ವಹಿಸಿಕೊಂಡ ನಂತರ ಬ್ಲಿಂಕೆನ್ ಅವರ ಭಾರತದ ಮೊದಲ ಭೇಟಿ ಇದಾಗಿದೆ. ಪ್ರಧಾನಿ ಮೋದಿ, ವಿದೇಶಾಂಗ ಸಚಿವ ಎಸ್. ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್‌ರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.
ಪಾಕಿಸ್ತಾನ ಉಗ್ರರ ಸ್ವರ್ಗವಾಗುತ್ತಿರುವುದು, ಅಫ್ಘಾನಿಸ್ತಾನದಲ್ಲಿ ಅಮೆರಿಕ ಮತ್ತು ನ್ಯಾಟೋ ಪಡೆಗಳು ವಾಪಸಾಗುತ್ತಿರುವಂತೆಯೇ ತಾಲಿಬಾನ್ ಉಗ್ರರ ಬಲ ವರ್ಧನೆ, ಮುಂದಿನ ಹಂತದ ಎರಡೂ ದೇಶಗಳ ನಡುವಿನ ರಕ್ಷಣೆ ಮತ್ತು ವಿದೇಶಾಂಗ ಸಚಿವರ 2 ಪ್ಲಸ್ 2 ಸಭೆ, ಅದಕ್ಕಿಂತ ಮೊದಲು ರಕ್ಷಣೆ ಹಾಗೂ ತಾಂತ್ರಿಕ ಕ್ಷೇತ್ರಕ್ಕೆ ಸಂಬಂಧಿಸಿದ ಪರಿಣತಿಗಳ ವಿನಿಮಯ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಬಗ್ಗೆ ಬ್ಲಿಂಕೆನ್ ಚರ್ಚಿಸಲಿದ್ದಾರೆ.