ಶಿವಕಾಶಿ/ವಿರುಧುನಗರ:ಪಟಾಕಿ ತಯಾರಿಕೆಗೆ ಖ್ಯಾತಿಯಾಗಿರುವ ತಮಿಳುನಾಡಿನ ಶಿವಕಾಶಿಯ ಎರಡು ಕಾರ್ಖಾನೆಗಳಲ್ಲಿ ಮಂಗಳವಾರ ಸಂಭವಿಸಿದ ಭೀಕರ ಸ್ಫೋಟದಲ್ಲಿ 10 ಮಂದಿ ಸುಟ್ಟು ಕರಕಲಾಗಿದ್ದಾರೆ. 15ಕ್ಕೂ ಅಧಿಕ ಕಾರ್ಮಿಕರು ತೀವ್ರವಾಗಿ ಗಾಯಗೊಂಡಿದ್ದಾರೆ. ವಿಜಯದಶಮಿ ಮತ್ತು ದೀಪಾವಳಿಯ ಸಂಭ್ರಮದ ಹೊತ್ತಲ್ಲೇ ದುರಂತ ಸಂಭವಿಸಿದೆ.
ವಿರುಧುನಗರ ಸಮೀಪದ ಶಿವಕಾಶಿಯಲ್ಲಿ ಎರಡು ಪ್ರತ್ಯೇಕ ಸ್ಫೋಟಗಳು ಸಂಭವಿಸಿವೆ. ಬೂದುಪಟ್ಟಿ ರೆಂಗಪಾಳ್ಯಂ ಪ್ರದೇಶದಲ್ಲಿರುವ ಕಾನಿಷ್ಕರ್ ಪಟಾಕಿ ಕಾರ್ಖಾನೆಯಲ್ಲಿ ಮೊದಲ ಸ್ಫೋಟ ಸಂಭವಿಸಿತು. ಇಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಪೈಕಿ 9 ಮಂದಿ ಬೆಂಕಿಗೆ ಆಹುತಿಯಾದರು. ಘಟನೆಯ ಪ್ರದೇಶ ಸುತ್ತ ದೊಡ್ಡ ಸ್ಫೋಟಕ ಸದ್ದು ಕೇಳಿಬಂದಿತು. ಬೆಂಕಿಗೆ ಕೆನ್ನಾಲಿಗೆಗೆ ಸಿಲುಕಿದ ಕೆಲ ಕಾರ್ಮಿಕರು ಸುಟ್ಟ ಗಾಯಕ್ಕೀಡಾಗಿದ್ದಾರೆ. ಅವರನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನೊಂದು ಸ್ಫೋಟವು ರೆಡ್ಡಿಪಟ್ಟಿ ಪ್ರದೇಶದಲ್ಲಿರುವ ಮುತ್ತು ವಿಜಯನ್ ಒಡೆತನದ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿತು. ಇಲ್ಲಿ ಓರ್ವ ಕಾರ್ಮಿಕ ಬೆಂಕಿಗೆ ಬಲಿಯಾಗಿದ್ದಾನೆ. ಹಲವು ತೀವ್ರವಾಗಿ ಗಾಯಗೊಂಡಿದ್ದಾರೆ. ದುರಂತದಲ್ಲಿ ಸಾವುನೋವುಗಳ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಕಾರ್ಖಾನೆಗಳು ಭಸ್ಮ:ಹಬ್ಬದ ಹಿನ್ನೆಲೆಯಲ್ಲಿ ಎರಡೂ ಕಾರ್ಖಾನೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಪಟಾಕಿಗಳನ್ನು ಶೇಖರಿಸಿಡಲಾಗಿತ್ತು. ಯಾವ ಕಾರಣಕ್ಕಾಗಿ ಪಟಾಕಿಗಳಿಗೆ ಬೆಂಕಿ ಹೊತ್ತಿಕೊಂಡಿದೆ ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಬೆಂಕಿ ಹೊತ್ತಿಕೊಂಡ ಪರಿಣಾಮ ಎರಡೂ ಕಾರ್ಖಾನೆಗಳು ಸುಟ್ಟು ಭಸ್ಮವಾಗಿವೆ. ವಿಷಯ ತಿಳಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.