ಕಣ್ಣೂರ್(ಕೇರಳ): ಮೂಢನಂಬಿಕೆ ದೇಶದ ಅತ್ಯಂತ ದೊಡ್ಡ ಪಿಡುಗು. ಇದು ವ್ಯಕ್ತಿಗತವಾದರೂ ಕೂಡಾ ಸಮಾಜದ ಬೆಳವಣಿಗೆಗೆ ಮಾರಕವಾಗಿ ಪರಿಣಮಿಸುತ್ತದೆ. ಕೇರಳದ ಕಣ್ಣೂರಿನಲ್ಲಿ ಮೂಢನಂಬಿಕೆ ಮತ್ತು ಕಂದಾಚಾರದ ಕಾರಣದಿಂದಾಗಿ ಓರ್ವ ಬಾಲಕಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಕೇವಲ 11 ವರ್ಷದ ಫಾತಿಮಾ ಸಾವನ್ನಪ್ಪಿದ ಬಾಲಕಿಯಾಗಿದ್ದು, ತಂದೆ ಸತ್ತಾರ್ ಮೂಢನಂಬಿಕೆಯ ಕಾರಣದಿಂದಾಗಿ ಬಾಲಕಿ ಸಾವನ್ನಪ್ಪಿರುವುದು ಗೊತ್ತಾಗಿದೆ. ಜ್ವರದಿಂದ ಬಳಲುತ್ತಿದ್ದ ಬಾಲಕಿಯನ್ನು ಸತ್ತಾರ್ ಆಸ್ಪತ್ರೆಗೆ ಕರೆದುಕೊಂಡು ಹೋಗದಿರುವುದೇ ಸಾವಿಗೆ ಕಾರಣ ಎಂದು ಪೊಲೀಸರ ಪ್ರಾಥಮಿಕ ವರದಿಯಲ್ಲಿ ಬಹಿರಂಗವಾಗಿದೆ.
ಜ್ವರ ತೀವ್ರವಾದರೂ ತಲೆಕೆಡಿಸಿಕೊಳ್ಳದ ಸತ್ತಾರ್ ಇಮಾಮ್ (ಮುಸ್ಲಿಂ ಧರ್ಮದ ಮುಖಂಡ, ಆಗಾಗ ಮುಸ್ಲಿಮರಿಗೆ ಕೌನ್ಸಿಲಿಂಗ್ ಮಾಡುವ ಅಧಿಕಾರ ಈತನಿಗಿರುತ್ತದೆ) ಉವೈಸ್ ಬಳಿ ಬಾಲಕಿಯನ್ನು ಕರೆದೊಯ್ದು, ಧಾರ್ಮಿಕ ವಿಧಿವಿಧಾನಗಳ ಮೂಲಕ ಚಿಕಿತ್ಸೆ ಕೊಡಿಸಲು ಮುಂದಾಗುತ್ತಾನೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಫಾತಿಮಾ ಸಾವನ್ನಪ್ಪಿದ್ದಾಳೆ.