ಕೋಲ್ಕತ್ತಾ (ಪಶ್ಚಿಮಬಂಗಾಳ) :ಅತಿದೊಡ್ಡ ರಾಜ್ಯ ಉತ್ತರಪ್ರದೇಶ ಸೇರಿದಂತೆ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ನಾಲ್ಕು ರಾಜ್ಯಗಳಲ್ಲಿ ಭರ್ಜರಿ ಜಯ ಸಾಧಿಸಿದೆ.
ಈ ಮೂಲಕ 2024ರ ಲೋಕಸಭೆ ಚುನಾವಣೆಗೆ ಕೇಸರಿ ಪಾಳಯ ರಣಕಹಳೆ ಮೊಳಗಿಸಿದೆ. ನಿನ್ನೆ ದೆಹಲಿಯ ಕೇಂದ್ರ ಕಚೇರಿಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, 2024ರ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ ಜಯ ಸಾಧಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆದರೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾತ್ರ ಮೋದಿ ಹೇಳಿಕೆ ತಳ್ಳಿ ಹಾಕಿದ್ದಾರೆ. ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಸಾರ್ವಜನಿಕರ ಭಾವನೆಗಳ ನಿಜವಾದ ಪ್ರತಿಬಿಂಬವಲ್ಲ. ಈ ಚುನಾವಣೆಗಳು 2024ರಲ್ಲಿ ಬಿಜೆಪಿಗೆ ಏನಾಗಲಿದೆ ಎಂಬುದರ ಸ್ಪಷ್ಟ ಸೂಚನೆ ನೀಡಿವೆ.
ದೇಶದಲ್ಲಿ ಆಡಳಿತ ಪಕ್ಷದ ವಿರೋಧಿ ಅಲೆ ಇರುವುದು ಕಂಡು ಬರುತ್ತಿದೆ. ಈ ನಾಲ್ಕು ರಾಜ್ಯಗಳ ಚುನಾವಣೆ ಬಿಜೆಪಿಗೆ ದೊಡ್ಡ ನಷ್ಟವಾಗಿ ಪರಿಣಮಿಸಲಿವೆ ಎಂದಿದ್ದಾರೆ.
ಇದನ್ನೂ ಓದಿರಿ:'ಯುಪಿಯಲ್ಲಿ ಬಿಜೆಪಿ ಗೆಲ್ಲಿಸಿದ ಮಾಯಾವತಿ,ಓವೈಸಿಗೆ ಪದ್ಮವಿಭೂಷಣ, ಭಾರತ ರತ್ನ ನೀಡಬೇಕು': ಶಿವಸೇನೆ
ಉತ್ತರಪ್ರದೇಶದಲ್ಲಿ ಇವಿಎಂ ಟ್ಯಾಂಪರಿಂಗ್ ಘಟನೆ ನಡೆದ ನಂತರ ಕೂಡ ಫೋರೆನ್ಸಿಕ್ ಪರೀಕ್ಷೆ ಏಕೆ ನಡೆಸಲಿಲ್ಲ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಅಖಿಲೇಶ್ ಯಾದವ್ ಅವರನ್ನ ಬಲವಂತವಾಗಿ ಸೋಲಿಸಲಾಯಿತು. ಚುನಾವಣೆಯಲ್ಲಿ ಅವ್ಯವಹಾರವಾಗಿದೆ. ಈ ಫಲಿತಾಂಶದಿಂದ ಅಖಿಲೇಶ್ ಯಾದವ್ ನಿರಾಶರಾಗಬಾರದು ಎಂದರು.
ಬಿಜೆಪಿಯೇತರ ಮತ್ತು ಕಾಂಗ್ರೆಸ್ಸೇತರ ಪಕ್ಷಗಳ ಒಗ್ಗಟ್ಟಿಗೆ ಕರೆ : 2024ರ ಲೋಕಸಭೆ ಚುನಾವಣೆಯಲ್ಲಿ ಎಲ್ಲ ಬಿಜೆಪಿಯೇತರ ಮತ್ತು ಕಾಂಗ್ರೆಸ್ಸೇತರ ಪಕ್ಷಗಳು ಒಗ್ಗಟ್ಟಿನಿಂದ ಚುನಾವಣೆ ಎದುರಿಸಲು ಮಮತಾ ಬ್ಯಾನರ್ಜಿ ಕರೆ ನೀಡಿದ್ದು, ನಾವು ಕಾಂಗ್ರೆಸ್ ಮೇಲೆ ಅವಲಂಬಿತರಾಗಲು ಸಾಧ್ಯವಿಲ್ಲ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷವನ್ನ ಅವಲಂಬಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಈ ಹಿಂದೆ ಸಂಘಟನೆಯ ಮೂಲಕ ಇಡೀ ದೇಶವನ್ನ ವಶಪಡಿಸಿಕೊಳ್ಳುತ್ತಿತ್ತು. ಆದರೆ, ಇದೀಗ ಆ ಆಸಕ್ತಿ ಇಲ್ಲ. ಹೀಗಾಗಿ, ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿದೆ ಎಂದರು.