ಜೈಪುರ (ರಾಜಸ್ಥಾನ) :ರಾಜಸ್ಥಾನ ವಿಧಾನಸಭೆಗೆ ಈಚೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರವನ್ನು ಸೋಲಿಸಿ ಅಧಿಕಾರಕ್ಕೆ ಬಂದಿರುವ ಬಿಜೆಪಿ, ಮೊದಲ ಆಘಾತ ಅನುಭವಿಸಿದೆ. ಕರಣ್ಪುರ ವಿಧಾನಸಭೆ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಭೇರಿ ಬಾರಿಸಿದ್ದಾರೆ. ಚುನಾವಣೆಗೂ ಮೊದಲೇ ಸಚಿವರಾಗಿ ಘೋಷಿತವಾಗಿದ್ದ ಬಿಜೆಪಿಯ ಸುರೇಂದ್ರ ಪಾಲ್ ಸಿಂಗ್ ಸೋಲು ಕಂಡಿದ್ದಾರೆ.
ಸಾರ್ವತ್ರಿಕ ಚುನಾವಣೆಯ ವೇಳೆ ಕಾಂಗ್ರೆಸ್ ಅಭ್ಯರ್ಥಿ ಗುರ್ಮೀತ್ ಸಿಂಗ್ ಕುನ್ನಾರ್ ನಿಧನರಾಗಿದ್ದರು. ಇದರಿಂದ ಈ ಕ್ಷೇತ್ರದ ಚುನಾವಣೆಯನ್ನು ರದ್ದುಗೊಳಿಸಲಾಗಿತ್ತು. ಜನವರಿ 5 ರಂದು ಕ್ಷೇತ್ರಕ್ಕೆ ಪ್ರತ್ಯೇಕವಾಗಿ ಮತದಾನ ನಡೆಸಲಾಗಿತ್ತು. ಇಂದು ಫಲಿತಾಂಶ ಪ್ರಕಟಗೊಂಡಿದ್ದು, ಸಚಿವ ಸುರೇಂದ್ರ ಪಾಲ್ ಸಿಂಗ್ ಪರಾಜಯ ಕಂಡು ಆಘಾತ ಅನುಭವಿಸಿದ್ದಾರೆ.
'ಕೈ' ಹಿಡಿದ ಅನುಕಂಪ:ಸಾರ್ವತ್ರಿಕ ಚುನಾವಣೆಯ ವೇಳೆ ಮೃತಪಟ್ಟಿದ್ದ ಕಾಂಗ್ರೆಸ್ ಅಭ್ಯರ್ಥಿ ಗುರ್ಮೀತ್ ಸಿಂಗ್ ಕುನ್ನಾರ್ ಅವರ ಪುತ್ರ ರೂಪೀಂದರ್ ಸಿಂಗ್ ಕುನ್ನಾರ್ರನ್ನು ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿತ್ತು. ಅನುಕಂಪದ ಆಧಾರದ ಮೇಲೆ ಮತ ಕೇಳಿದ್ದ ರೂಪೀಂದರ್ ಕ್ಷೇತ್ರದ ಜನರ ಆಶೀರ್ವಾದ ಪಡೆದಿದ್ದಾರೆ. ಕುನ್ನಾರ್ 64,401 ಮತಗಳನ್ನು ಪಡೆದರೆ, ಸಚಿವ ಸುರಿಂದರ್ ಪಾಲ್ ಸಿಂಗ್ 54,546 ಮತಗಳನ್ನು ಪಡೆದಿದ್ದಾರೆ. ಅನುಕಂಪದ ಅಲೆಯ ಮುಂದೆ ಸಚಿವರ ಖ್ಯಾತಿ ಮರೆಯಾಗಿದೆ.