ಕೋಲ್ಕತಾ: ಸಿಪಿಐನ ಕಾರ್ಮಿಕರನ್ನು ತೃಣಮೂಲ ಕಾಂಗ್ರೆಸ್ ಗೂಂಡಾಗಳು ಥಳಿಸಿ, ಅವರ ಮನೆಗಳನ್ನು ಸುಟ್ಟು ಹಾಕಿದ್ದಾರೆ. ಇದರಿಂದ ಕಾರ್ಮಿಕರಿಗೆ ತಮ್ಮ ಪ್ರದೇಶಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಟಿಎಂಸಿ ಕೈಯಲ್ಲಿ ಅವಮಾನಗಳನ್ನು ಎದುರಿಸುತ್ತಿರುವ ತಳಮಟ್ಟದ ಸಿಪಿಐ ಕಾರ್ಮಿಕರು ಇದನ್ನು ಎಷ್ಟು ದಿನ ಸಹಿಸಿಕೊಳ್ಳುತ್ತಾರೆ ಎಂದು ಪಶ್ಚಿಮ ಬಂಗಾಳದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಯಂತನ್ ಬಸು ಗುಡುಗಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತೃಣಮೂಲ ಮತ್ತು ಸಿಪಿಐ ನಡುವಿನ ರಹಸ್ಯ ಸ್ಥಾನ ಹಂಚಿಕೆ ಆಗಿದೆ ಎಂದು ಆರೋಪಿಸಿದ ಅವರು, ಹೊಂದಾಣಿಕೆ ವ್ಯವಸ್ಥೆ ಕುರಿತಂತೆ ವಿವರಿಸಿದರು. ನಂದಿಗ್ರಾಮ ವಿಧಾನಸಭಾ ಕ್ಷೇತ್ರದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಸ್ಪರ್ಧೆ ನಡೆಸುತ್ತಿದ್ದು, ಇವರಿಗೆ ಪ್ರತಿಸ್ಪರ್ಧಿಯಾಗಿ ಟಿಎಂಸಿ ಪಕ್ಷದ ನಂಬಿಕಸ್ಥ ಮತ್ತು ಹಾಲಿ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಕಣಕ್ಕೆ ಇಳಿದಿದ್ದಾರೆ.
ನಂದಿಗ್ರಾಮದಲ್ಲಿ ಶೇ. 35ರಷ್ಟು ಅಲ್ಪಸಂಖ್ಯಾತ ಸಮುದಾಯದ ಮತದಾರರಿದ್ದಾರೆ. ಅಬ್ಬಾಸ್ ಸಿದ್ದೀಕ್ ಅವರು ಎಐಎಸ್ಎಫ್ ಸ್ಥಾನಕ್ಕಾಗಿ ತಮ್ಮ ಹಕ್ಕನ್ನು ತ್ಯಾಗ ಮಾಡಲು ನಿರ್ಧರಿಸಿದ್ದಾರೆ. ಇತ್ತ ಸಿಪಿಐ ಪ್ರಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿಲ್ಲ. ಈ ಮೂಲಕ ಸಿಎಂ ಮಮತಾ ಅವರಿಗೆ ಅನುಕೂಲ ಮಾಡಿಕೊಡಲು ಸಿಪಿಐ ಮುಂದಾಗಿರುವುದು ಸ್ಪಷ್ಟವಾಗಿದೆ ಎಂದು ಆರೋಪಿಸಿದರು.