ಹೈದರಾಬಾದ್ (ತೆಲಂಗಾಣ): ಮುಂಬರುವ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಜನತೆ ಅಧಿಕಾರಕ್ಕೆ ತಂದರೆ ಹಿಂದುಳಿದ ವರ್ಗದ ನಾಯಕನನ್ನು ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ. ಇಂದು ಸೂರ್ಯಪೇಟ್ ಜಿಲ್ಲೆಯಲ್ಲಿ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಪಾಲ್ಗೊಂಡರು.
''ನಾನು ತೆಲಂಗಾಣದ ಜನತೆಗೆ ಒಂದು ಮಾತು ಹೇಳ ಬಯಸುತ್ತೇನೆ. ನೀವು ಬಿಜೆಪಿಗೆ ಆಶೀರ್ವಾದ ಮಾಡಿ, ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತಂದರೆ, ಮುಂದಿನ ಮುಖ್ಯಮಂತ್ರಿ ಹಿಂದುಳಿದ ವರ್ಗದವರೇ ಆಗಿರುತ್ತಾರೆ. ಹಿಂದುಳಿದ ವರ್ಗದ ನಾಯಕರನ್ನು ಸಿಎಂ ಮಾಡಲು ನಿರ್ಧರಿಸಿದ್ದೇವೆ'' ಎಂದು ಪಕ್ಷದ ಉನ್ನತ ನಾಯಕ ಶಾ ತಿಳಿಸಿದರು. ಇದೇ ವೇಳೆ, ಕಾಂಗ್ರೆಸ್ ಹಾಗೂ ತೆಲಂಗಾಣದ ಆಡಳಿತಾರೂಢ ಬಿಆರ್ಎಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ''ಎರಡೂ ವಂಶಪಾರಂಪರ್ಯ ಪಕ್ಷಗಳು. ರಾಜ್ಯಕ್ಕೆ ಆ ಪಕ್ಷಗಳು ಒಳ್ಳೆಯದು ಮಾಡುವುದಿಲ್ಲ'' ಎಂದರು.
ಮುಂದುವರೆದು, ''ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ತಮ್ಮ ಮಗ ಕೆ.ಟಿ.ರಾಮರಾವ್ ಅವರನ್ನು ಮುಖ್ಯಮಂತ್ರಿ ಮಾಡಲು ಬಯಸಿದರೆ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ತಮ್ಮ ಪುತ್ರ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಮಾಡಲು ಬಯಸುತ್ತಿದ್ದಾರೆ. ದಲಿತ ಮುಖ್ಯಮಂತ್ರಿ ಮಾಡುವುದು ಹಾಗೂ ದಲಿತರಿಗೆ ಮೂರು ಎಕರೆ ಜಮೀನು ಒದಗಿಸುವುದು ಸೇರಿ ಚುನಾವಣಾ ಭರವಸೆಗಳನ್ನು ಈಡೇರಿಸುವಲ್ಲಿ ಸಿಎಂ ಕೆಸಿಆರ್ ವಿಫಲರಾಗಿದ್ದಾರೆ'' ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಸೇರಿದ ಬಿಜೆಪಿ ನಾಯಕ ರಾಜಗೋಪಾಲ್ ರೆಡ್ಡಿ:ಮತ್ತೊಂದೆಡೆ, ಚುನಾವಣೆ ಕೆಲ ವಾರಗಳಷ್ಟೇ ಬಾಕಿ ಇರುವುದಾಗಿ ರಾಜ್ಯದಲ್ಲಿ ಬಿಜೆಪಿಗೆ ಆಘಾತ ಎದುರಾಗಿದೆ. ಕಳೆದ ವರ್ಷ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಉದ್ಯಮಿ ಕೋಮಟಿರೆಡ್ಡಿ ರಾಜಗೋಪಾಲ್ ರೆಡ್ಡಿ ಇಂದು ಮರಳಿ ಕಾಂಗ್ರೆಸ್ ಸೇರಿದ್ದಾರೆ. ಕಳೆದ ಚುನಾವಣೆಯಲ್ಲಿ ಮುನುಗೋಡು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಗೆದ್ದಿದ್ದ ಅವರು ಕಳೆದ ಆಗಸ್ಟ್ನಲ್ಲಿ ಬಿಜೆಪಿ ಸೇರಿದ್ದರು. ನಂತರ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲು ಕಂಡಿದ್ದರು.
ಇದೀಗ ಮತ್ತೆ ಬಿಜೆಪಿ ತೊರೆದಿರುವ ಮಾಜಿ ಸಂಸದರೂ ಆದ ರಾಜುಗೋಪಾಲ್ ರೆಡ್ಡಿ, ಇಂದು ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಮ್ಮುಖದಲ್ಲಿ ಸೇರ್ಪಡೆಗೊಂಡಿದ್ದಾರೆ. ಇವರೊಂದಿಗೆ ಮಾಜಿ ಸಚಿವ ಮೋತ್ಕುಪಲ್ಲಿ ನರಸಿಂಹುಲು, ಮಾಜಿ ಶಾಸಕ ಯೇನುಗು ರವೀಂದರ್ ರೆಡ್ಡಿ, ಮಾಜಿ ಎಂಎಲ್‌ಸಿಗಳಾದ ನೇತಿ ವಿದ್ಯಾಸಾಗರ್, ಸಂತೋಷ್ ಕುಮಾರ್, ಅಕುಲಾ ಲಲಿತಾ, ಕಪಿಲವಾಯಿ ದಿಲೀಪ್ ಕುಮಾರ್ ಮತ್ತು ನೀಲಂ ಮಧು ಅವರನ್ನು ಕಾಂಗ್ರೆಸ್ ನಾಯಕರು ಪಕ್ಷಕ್ಕೆ ಬರ ಮಾಡಿಕೊಂಡಿದ್ದಾರೆ.
ತೆಲಂಗಾಣದ 119 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್ 30ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 3ರಂದು ಫಲಿತಾಂಶ ಪ್ರಕಟವಾಗಿದೆ. ಚುನಾವಣೆ ಗೆಲ್ಲಲು ಆಡಳಿತಾರೂಢ ಬಿಆರ್ಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಪೈಪೋಟಿ ಏರ್ಪಟ್ಟಿದೆ.
ಇದನ್ನೂ ಓದಿ:'ಭೂಗಳ್ಳ' ಎಂದ ಬಿಜೆಪಿ ಅಭ್ಯರ್ಥಿ ಕುತ್ತಿಗೆಗೆ ಕೈ ಹಾಕಿದ ಬಿಆರ್ಎಸ್ ಶಾಸಕ: ನೇರ ಪ್ರಸಾರ ಕಾರ್ಯಕ್ರಮ ಅಲ್ಲೋಲ ಕಲ್ಲೋಲ