ಕೋಲ್ಕತ್ತಾ(ಪಶ್ಚಿಮ ಬಂಗಾಳ): ಭಾರಿ ಕುತೂಹಲ ಮೂಡಿಸಿದ್ದ ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ಮೊದಲ ಪಟ್ಟಿಯನ್ನ ಬಿಡುಗಡೆ ಮಾಡಿದರು. ಮೊದಲ ಪಟ್ಟಿಯಲ್ಲಿ 57 ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ಕೇಸರಿ ಬ್ರಿಗೇಡ್ ಘೋಷಿಸಿದೆ.
ಸುದ್ದಿಗೋಷ್ಠಿ ಉದ್ದೇಶಿಸಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅಭ್ಯರ್ಥಿಗಳನ್ನು ಘೊಷಿಸಿದರು. ಸಿಎಂ ಮಮತಾ ಬ್ಯಾನರ್ಜಿ ಸ್ಪರ್ಧಿಸುವ ನಂದಿ ಗ್ರಾಮ ಕ್ಷೇತ್ರದಿಂದ ಸುವೆಂದು ಅಧಿಕಾರಿ ಸ್ಪರ್ಧಿಸುತ್ತಿದ್ದಾರೆ.
ಇದನ್ನೂ ಓದಿ..ಮತ್ತೊಂದು ವಿಕೆಟ್ ಪತನ: ಟಿಎಂಸಿಗೆ ರಾಜೀನಾಮೆ ನೀಡಿ ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿರುವ ದಿನೇಶ್ ಬಜಾಜ್
ಸುವೆಂದು ಅಧಿಕಾರಿ ಇತ್ತೀಚೆಗಷ್ಟೇ ಟಿಎಂಸಿ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಮಮತಾ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿದ್ದ ಸುವೇಂದು ಅಧಿಕಾರಿ ಮಮತಾ ಅಳಿಯನ ವಿರುದ್ಧ ಸಿಡಿದೆದ್ದು ಇತ್ತೀಚೆಗಷ್ಟೇ ಬಿಜೆಪಿ ಸೇರ್ಪಡೆಗೊಂಡಿದ್ದರು.
ತಾವು ಪ್ರತಿನಿಧಿಸುತ್ತಿರುವ ಕ್ಷೇತ್ರದಿಂದ ನನ್ನೆದುರಿಗೆ ನಿಂತು ಗೆದ್ದು ಬರುವಂತೆ ಸವಾಲು ಹಾಕಿದ್ದ ಸುವೇಂದು ಅಧಿಕಾರಿಗೆ ಮಮತಾ ಅಲ್ಲಿಂದಲೇ ತಮ್ಮ ಅಭ್ಯರ್ಥಿತ್ವವನ್ನು ಘೋಷಿಸಿದ್ದರು. ಇದಕ್ಕೂ ಮೊದಲೇ ಸವಾಲು ಹಾಕಿದ್ದ ಸುವೇಂದು ಅಧಿಕಾರಿ ತಾವು 1 ಲಕ್ಷ ಮತಗಳಿಂದ ಗೆಲುವು ಸಾಧಿಸುವುದಾಗಿ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಸವಾಲು ಹಾಕಿದ್ದರು.
ಮಮತಾ ನಂದಿಗ್ರಾಮದಿಂದಲೇ ತಮ್ಮ ಉಮೇದುವಾರಿಕೆ ಘೋಷಣೆ ಮಾಡಿರುವುದರಿಂದ ಈ ಕ್ಷೇತ್ರವೀಗ ದೇಶ ಹಾಗೂ ವಿದೇಶದ ಗಮನ ಸೆಳೆಯಲಿದೆ. ಪಂಚರಾಜ್ಯಗಳ ಚುನಾವಣೆಯಲ್ಲಿ ನಂದಿಗ್ರಾಮ ಮಿಂಚಲಿದೆ.
ಈ ಹಿಂದೆ ನಂದಿಗ್ರಾಮದಿಂದ ಟಾಟಾ ಕಂಪನಿಯನ್ನ ಎತ್ತಂಗಡಿ ಮಾಡುವಲ್ಲಿ ಸುವೇಂದು ಅಧಿಕಾರಿ ಯಶಸ್ವಿಯಾಗಿದ್ದರು. ಸುವೇಂದು ನೇತೃತ್ವದಲ್ಲೇ ನಂದಿಗ್ರಾಮ ಹೋರಾಟ ನಡೆದಿತ್ತು. ಅಷ್ಟೇ ಅಲ್ಲ ಎಡಪಕ್ಷಗಳ ವಿರುದ್ಧ ಹೋರಾಟಕ್ಕೆ ಈ ಹೋರಾಟವೇ ಆಸರೆಯಾಗಿತ್ತು. ಈ ಮೂಲಕ ಮಮತಾ ಬ್ಯಾನರ್ಜಿ ಕೂಡಾ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.
ಆದರೆ ಈಗ ಸುವೇಂದು ಅಧಿಕಾರಿ ಮಮತಾ ವಿರುದ್ಧ ಸೆಣಸುತ್ತಿದ್ದಾರೆ. ಅವರ ಪಕ್ಷ ಬದಲಾಗಿದ್ದು, ಚುನಾವಣೆಯಲ್ಲಿ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.