ಚಂಡೀಗಢ :ಚಂಡೀಗಢ ಮಹಾನಗರ ಪಾಲಿಕೆಯ ಮೇಯರ್ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಬಿಜೆಪಿಯ ಅನೂಪ್ ಗುಪ್ತಾ ಅವರು ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಅನೂಪ್ ಗುಪ್ತಾ ಅವರು ಒಂದು ಮತದ ಅಂತರದಿಂದ ಆಪ್ನ ಜಸ್ಬೀರ್ ಸಿಂಗ್ ಲಾಡಿ ಅವರನ್ನು ಸೋಲಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಆಪ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು.
ಒಂದು ಮತದ ಅಂತರದಿಂದ ಬಿಜೆಪಿಗೆ ಗೆಲುವು : ಇಂದು ಪ್ರಕಟವಾದ ಮೇಯರ್ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿಯ ಅನೂಪ್ ಗುಪ್ತಾ ಅವರು 15 ಮತಗಳನ್ನು ಪಡೆದರೆ, ಆಪ್ನ ಜಸ್ಬೀರ್ ಸಿಂಗ್ ಲಾಡಿ ಅವರು 14 ಮತಗಳನ್ನು ಪಡೆದು ಕೇವಲ ಒಂದು ಮತಗಳಿಂದ ಪರಾಭವಗೊಂಡು ನಿರಾಶೆ ಅನುಭವಿಸಿದರು. ಒಟ್ಟು 29 ಮತಗಳು ಚಲಾವಣೆಯಾಗಿದ್ದವು.
ಕಾಂಗ್ರೆಸ್, ಅಕಾಲಿದಳ ಚುನಾವಣೆಯಲ್ಲಿ ಭಾಗವಹಿಸದಿರಲು ನಿರ್ಧಾರ: ಇನ್ನು ಚಂಡೀಗಢ ಮಹಾನಗರ ಪಾಲಿಕೆಯ ಹಿರಿಯ ಮೇಯರ್ ಮತ್ತು ಉಪ ಮೇಯರ್ ಹುದ್ದೆಗಳಿಗೆ ಮುಂದಿನ ದಿನಗಳಲ್ಲಿ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಮತ್ತು ಅಕಾಲಿದಳ ಚುನಾವಣೆಯಲ್ಲಿ ಭಾಗವಹಿಸದಿರಲು ಈಗಾಗಲೇ ನಿರ್ಧರಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಕಾಂಗ್ರೆಸ್ ಚುನಾವಣೆ ಬಹಿಷ್ಕರಿಸಿರುವುದರಿಂದ ಹಿರಿಯ ಉಪಮೇಯರ್ ಹುದ್ದೆಗೆ ಬಿಜೆಪಿಯ ಕನ್ವರ್ಜಿತ್ ರಾಣಾ ಮತ್ತು ಆಪ್ನ ತರುಣಾ ಮೆಹ್ತಾ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಇನ್ನು ಉಪಮೇಯರ್ ಸ್ಥಾನಕ್ಕೆ ಬಿಜೆಪಿಯು ಹರ್ಜೀತ್ ಸಿಂಗ್ ಅವರನ್ನು ನಾಮನಿರ್ದೇಶನ ಮಾಡಿದ್ದು, ಆಪ್ ಸುಮನ್ ಸಿಂಗ್ ಅವರನ್ನು ನಾಮನಿರ್ದೇಶನ ಮಾಡಿದೆ.