ಕರ್ನಾಟಕ

karnataka

ETV Bharat / bharat

"ಮುಝೇ ಚಲ್ತೆ ಜಾನಾ ಹೈ..": ಬಿಜೆಪಿಯಿಂದ ಮೋದಿ ರಾಜಕೀಯ ಪಯಣದ ವಿಶೇಷ ವಿಡಿಯೋ - Prime Minister Modis political journey

ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್​ ಸಿಎಂ ಆದಾಗಿನಿಂದ ಹಿಡಿದು 2 ಬಾರಿ ಪ್ರಧಾನಿಯಾದವರೆಗಿನ ಸಾಧನೆ, ಅಡೆತಡೆಗಳ ಬಗ್ಗೆ ಬಿಜೆಪಿ ಎನಿಮೇಟೆಡ್​ ವಿಡಿಯೋ ರೂಪಿಸಿದೆ. ಅದನ್ನು ತನ್ನ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದೆ.

ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಬಿಜೆಪಿ ವಿಶೇಷ ವಿಡಿಯೋ
ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಬಿಜೆಪಿ ವಿಶೇಷ ವಿಡಿಯೋ

By

Published : Mar 16, 2023, 7:07 AM IST

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿಯವರೆಗೂ ಸಾಗಿಬಂದ ಹಾದಿ, ಎದುರಿಸಿದ ಟೀಕೆ, ಅಡ್ಡಿಗಳನ್ನು ಸಮಗ್ರವಾಗಿ ಚಿತ್ರಿಸಿದ ಎನಿಮೇಟೆಡ್​ ವಿಡಿಯೋವನ್ನು ಬಿಜೆಪಿ ರೂಪಿಸಿದೆ. ಅದಕ್ಕೆ ಮುಝೇ ಚಲ್ತೆ ಜಾನಾ ಹೈ(ನಾನು ನಡೆಯುತ್ತಾ ಸಾಗಬೇಕು) ಎಂಬ ತಲೆಬರಹ ನೀಡಲಾಗಿದೆ. ಇದು 2024 ಲೋಕಸಭೆ ಚುನಾವಣೆ ಗೆಲ್ಲುವ ಗುರಿ ಎಂದೇ ವಿಶ್ಲೇಷಿಸಲಾಗಿದೆ.

ನರೇಂದ್ರ ಮೋದಿ ಅವರ ಕುರಿತ ವಿಡಿಯೋವನ್ನು ಬಿಜೆಪಿ ತನ್ನ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದೆ. ಗುಜರಾತ್​ ಸಿಎಂ ಆದಾಗಿನಿಂದ ಹಿಡಿದು ಪ್ರಧಾನಿ ಹುದ್ದೆಗೆ ಎರಡನೇ ಬಾರಿಗೆ ಆಯ್ಕೆಯಾದವರೆಗೂ ವಿಡಿಯೋ ಸಾದರಪಡಿಸುತ್ತದೆ. ಈ ವೇಳೆ ಮೋದಿ ಅವರು ಎದುರಿಸಿದ ಅಡೆತಡೆಗಳು, ಬೈಗುಳಗಳು, ಮಾಡಿದ ಸಾಧನೆಗಳನ್ನು ವಿಡಿಯೋ ಒಂದೊಂದಾಗಿ ಬಿಚ್ಚಿಡುತ್ತಾ ಸಾಗುತ್ತದೆ. ಕೊನೆಗೆ ದೇಶದ ಆರ್ಥಿಕತೆಯನ್ನು 5 ಟ್ರಿಲಿಯನ್​ ಡಾಲರ್​ ಮಾಡಲಾಗುವುದು ಎಂಬುದರ ಮೂಲಕ ವಿಡಿಯೋ ಮುಕ್ತಾಯವಾಗುತ್ತದೆ.

2 ಬಾರಿ ಲೋಕಸಭೆ ಚುನಾವಣೆಯನ್ನು ಗೆದ್ದು ಪ್ರಧಾನಿಯಾಗಿ ಆಡಳಿತ ನಡೆಸಿದ ಪ್ರಧಾನಿ ಮೋದಿ ಅವರ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡುವ ವಿಡಿಯೋದಲ್ಲಿ ಎಲ್ಲಿಯೂ 2024 ಚುನಾವಣೆಯ ಸಿದ್ಧತೆ ಎಂಬುದರ ಬಗ್ಗೆ ಉಲ್ಲೇಖವಾಗಿಲ್ಲ. ಆದರೂ, ಇದು ಚುನಾವಣಾ ಸಿದ್ಧತೆಯ ಭಾಗ ಎಂದೇ ಹೇಳಲಾಗಿದೆ. ಮತ್ತೆ ಮೋದಿಯೇ ಪ್ರಧಾನಿಯಾಗಲಿದ್ದಾರೆ ಎಂಬುದನ್ನೂ ವಿಡಿಯೋ ಹೇಳಿಲ್ಲ. ಕಾಂಗ್ರೆಸ್ ನಾಯಕರ ವಾಗ್ದಾಳಿಗಳ ನಡುವೆ ನರೇಂದ್ರ ಮೋದಿ ಅವರು ಗುಜರಾತ್‌ನ ಮುಖ್ಯಮಂತ್ರಿ ಆದಾಗಿನಿಂದ ಹಿಡಿದು ಪ್ರಧಾನಿಯವರೆಗಿನ ಪ್ರಯಾಣವನ್ನು ಇದು ತೋರಿಸುತ್ತದೆ.

ವಿಡಿಯೋ ಹೀಗಿದೆ..:ಸಮಾಜದ ವಿವಿಧ ವರ್ಗಗಳಿಗೆ ಸೇವೆ ಸಲ್ಲಿಸಲು ಮತ್ತು ಭಾರತವನ್ನು ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ಧ್ಯೇಯದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೆಟ್ಟಿಲುಗಳ ಮೇಲೆ ನಡೆಯುತ್ತಾ ಸಾಗುತ್ತಾರೆ. ಇದಕ್ಕೆ "ಮುಝೆ ಚಲ್ತೇ ಜಾನಾ ಹೈ" (ನಾನು ನಡೆಯುತ್ತಲೇ ಇರಬೇಕು) ಎಂಬ ಶೀರ್ಷಿಕೆಯನ್ನು ನೀಡಲಾಗಿದ್ದು, ನಾಲ್ಕು ನಿಮಿಷ ಮೂವತ್ತೆರಡು ಸೆಕೆಂಡ್​ಗಳ ಎನಿಮೇಟೆಡ್​ ವಿಡಿಯೋ ಇದಾಗಿದೆ.

ವಿಡಿಯೋದ ಆರಂಭದಲ್ಲಿ ಗುಜರಾತ್ ಸಿಎಂ ಆಗಿದ್ದಾಗ ಕಾಂಗ್ರೆಸ್​ ಟೀಕಿಸಿದ್ದ ಮೌತ್​ ಕಾ ಸೌದಾಗರ್​ ಎಂಬ ಮಾತನ್ನೂ ಲೆಕ್ಕಿಸದೇ ಮೋದಿ ಅವರು ನಡೆಯುತ್ತಾ ಸಾಗುತ್ತಾರೆ. ಸೋನಿಯಾ ಗಾಂಧಿ, ರಾಹುಲ್​ ಗಾಂಧಿ ಇವರನ್ನು ಗಹಗಹಿಸಿ ನಗುತ್ತಾರೆ. ಅಮೆರಿಕದ ನಿಷೇಧವನ್ನೂ ಇಲ್ಲಿ ಪ್ರಸ್ತಾಪಿಸಲಾಗಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಣಿಶಂಕರ್ ಅಯ್ಯರ್ ಮತ್ತು ದಿಗ್ವಿಜಯ ಸಿಂಗ್ ಅವರು ನಾನಾ ರೀತಿಯಲ್ಲಿ ಟೀಕಿಸುತ್ತಿರುವುದೂ ಇದೆ.

ವಿಡಿಯೋ 2024 ರ ಸಂಸತ್ತಿನ ಚುನಾವಣೆಯ ಬಗ್ಗೆ ಯಾವುದೇ ಉಲ್ಲೇಖವನ್ನು ಹೊಂದಿಲ್ಲ. 2014 ಮತ್ತು 2019 ರ ಲೋಕಸಭಾ ಚುನಾವಣೆಗಳನ್ನು ದಾಟಿ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯ ಕಡೆಗೆ ಪ್ರಧಾನಿ ಮೋದಿ ಮೆಟ್ಟಿಲುಗಳನ್ನು ಹತ್ತುತ್ತಿರುವುದನ್ನು ತೋರಿಸುತ್ತದೆ. ಭುಜದ ಮೇಲೆ ತಮ್ಮ ಟ್ರೇಡ್‌ಮಾರ್ಕ್ ಆದ ಜೋಳಿಗೆಯನ್ನು ಹಾಕಿಕೊಂಡು ಪ್ರತಿಪಕ್ಷದ ನಾಯಕರ ಟೀಕೆಗಳನ್ನು ಲೆಕ್ಕಿಸದೇ, ಪ್ರಧಾನಿಯಾದ ನಂತರ ಬಡವರಿಗಾಗಿ ರೂಪಿಸಲಾದ ಸರ್ಕಾರದ ಯೋಜನೆಗಳನ್ನು ವಿಡಿಯೋ ಅನಾವರಣ ಮಾಡುತ್ತಾ ಸಾಗುತ್ತದೆ.

ವಿರೋಧ ಪಕ್ಷದ ನಾಯಕರು "ಮೌತ್ ಕಾ ಸೌದಾಗರ್", "ಚಾಯ್​ವಾಲಾ", "ಚೌಕಿದಾರ್ ಚೋರ್ ಹೈ" ಮತ್ತು "ಗೌತಮ್ ದಾಸ್" ಎಂದು ಕೂಗುವುದನ್ನು ತೋರಿಸಲಾಗಿದೆ. ಇದು ಪ್ರಧಾನಿ ಮೋದಿ ಅವರ ಪ್ರಯಾಣದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ದೇಶದಲ್ಲೇ ಅಭಿವೃದ್ಧಿಪಡಿಸಿದ ಲಸಿಕೆಯನ್ನು ಹಿಡಿದು ಕಣಿವೆಯ ಮೇಲೆ ಕಟ್ಟಲಾದ ಬಿಗಿಹಗ್ಗದ ಮೇಲೆ ಪ್ರಧಾನಿ ನಡೆದು ಸಾಗುತ್ತಾರೆ. ಅಮೆರಿಕದ ಅಧ್ಯಕ್ಷ ಜೋ ಬೈಡನ್, ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಬ್ರಿಟನ್​ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಕಿರು ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರಧಾನಿ ಮೋದಿ ಅವರು ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನಲ್ಲಿ(ಎಚ್​ಎಎಲ್​) ಹೆಲಿಕಾಪ್ಟರ್ ತಯಾರಿಕಾ ಘಟಕವನ್ನು ಪ್ರಾರಂಭಿಸುತ್ತಿರುವುದು, ರಫೇಲ್ ಯುದ್ಧ ವಿಮಾನ ಹಗರಣ ಆರೋಪ, ರಾಹುಲ್ ಗಾಂಧಿ ಅವರ ಟೀಕಾಪ್ರಹಾರ, ಬ್ರಿಟನ್​ ಮಾಧ್ಯಮವಾದ ಬಿಬಿಸಿಯ ಡಾಕ್ಯುಮೆಂಟರಿ ವಿವಾದ ಕೂಡ ಇದೆ. ಪ್ರಧಾನಿ ಮೋದಿ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿಯತ್ತ ಸಾಗುತ್ತಿರುವ ಮೂಲಕ ವಿಡಿಯೋ ಕೊನೆಗೊಳ್ಳುತ್ತದೆ. ಇದನ್ನು ಹಲವಾರು ಕೇಂದ್ರ ಸಚಿವರು, ಬಿಜೆಪಿಗರು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ಮಾಯಕೊಂಡ ಕ್ಷೇತ್ರದಲ್ಲಿ ಬಿಜೆಪಿ ಗುಜರಾತ್ ಮಾಡೆಲ್ ಟಿಕೆಟ್ ಹಂಚಿಕೆ ಸದ್ದು: ಗೆಲ್ಲಲು ಕಾಂಗ್ರೆಸ್​ ಪ್ರತಿತಂತ್ರ

ABOUT THE AUTHOR

...view details