ಕೋಲ್ಕತ್ತಾ(ಪಶ್ಚಿಮ ಬಂಗಾಳ): ಕಳೆದ ವರ್ಷ ಮೇ ತಿಂಗಳಲ್ಲಿ ಬಹಿರಂಗಗೊಂಡ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಗೆಲುವಿನ ನಗೆ ಬೀರಿ, ಮತ್ತೊಮ್ಮೆ ಅಧಿಕಾರ ರಚನೆ ಮಾಡಿದೆ. ತೀವ್ರ ಪೈಪೋಟಿ ನೀಡಿದ್ದ ಬಿಜೆಪಿ 77 ಸ್ಥಾನಗಳಲ್ಲಿ ಜಯ ಸಾಧಿಸಿ, ವಿರೋಧ ಪಕ್ಷವಾಗಿ ಹೊರಹೊಮ್ಮಿದೆ. ಈ ಚುನಾವಣೆ ಕುರಿತಾಗಿ ಇದೀಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮಾತನಾಡಿದ್ದಾರೆ.
ಪಶ್ಚಿಮ ಬಂಗಾಳ ಪ್ರವಾಸದಲ್ಲಿರುವ ಜೆಪಿ ನಡ್ಡಾ, ವಿಧಾನಸಭೆ ಚುನಾವಣೆಯಲ್ಲಿ ನಾವು ಗೆಲುವು ಸಾಧಿಸಬಹುದಾಗಿತ್ತು. ಆದರೆ, ಕೋವಿಡ್ ಎರಡನೇ ಅಲೆಯ ಕಾರಣ ನಮಗೆ ಪ್ರಚಾರ ನಡೆಸಲು ತೊಂದರೆಯಾಯಿತು ಎಂದು ಹೇಳಿಕೊಂಡಿದ್ದಾರೆ. ದೇಶದಲ್ಲಿ ಎರಡನೇ ಅಲೆ ಕಾರಣ ಲಾಕ್ಡೌನ್ ಹಾಗೂ ಕೋವಿಡ್ ಮಾರ್ಗಸೂಚಿ ಹೇರಿಕೆ ಮಾಡಲಾಗಿತ್ತು. ಹೀಗಾಗಿ, ನಮ್ಮ ಚುನಾವಣಾ ಪ್ರಚಾರದ ಕಾರ್ಯ ಸರಿಯಾಗಿ ನಡೆಸಲು ಆಗಲಿಲ್ಲ ಎಂದು ನಡ್ಡಾ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಒಟ್ಟು ಎಂಟು ಹಂತಗಳಲ್ಲಿ ಚುನಾವಣೆ ನಡೆದಿತ್ತು. ನಾಲ್ಕನೇ ಹಂತದ ಕ್ಷೇತ್ರಗಳಿಗೆ ಮತದಾನ ನಡೆಯುವ ಹೊತ್ತಿಗೆ ಕೋವಿಡ್ ಅಲೆ ಹೆಚ್ಚಾಗಿದ್ದರಿಂದ ಕೆಲವೊಂದು ಪ್ರದೇಶಗಳಲ್ಲಿ ಸರಿಯಾಗಿ ಪ್ರಚಾರ ನಡೆಸಲು ಸಾಧ್ಯವಾಗಲಿಲ್ಲ ಎಂದರು. ಪಶ್ಚಿಮ ಬಂಗಾಳದಲ್ಲಿ ನಮ್ಮ ಪ್ರಯತ್ನ ಯಾವುದೇ ಕಾರಣಕ್ಕೂ ನಿಲ್ಲಲ್ಲ ಎಂದಿರುವ ಅವರು, ಬರುವ ದಿನಗಳಲ್ಲಿ ಖಂಡಿತವಾಗಿ ತೃಣಮೂಲ ಕಾಂಗ್ರೆಸ್ ಸೋಲಿಸಿ, ನಮ್ಮ ಪಕ್ಷವನ್ನ ಅಧಿಕಾರಕ್ಕೆ ತರುತ್ತೇವೆ ಎಂಬ ಭರವಸೆ ಹೊರಹಾಕಿದರು. ಇದೇ ವೇಳೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ನಡ್ಡಾ ವಾಗ್ದಾಳಿ ಸಹ ನಡೆಸಿದರು.
ಇದನ್ನೂ ಓದಿ:ಪ್ರೇಮ, ಮದುವೆ ಆಮೇಲೆ ದರೋಡೆ.. ವಾರ್ಷಿಕೋತ್ಸವದ ಬಳಿಕ ಯುವಕನಿಗೆ ಗೊತ್ತಾಯ್ತು ನಾನು 7ನೇ ಪತಿ ಅಂತಾ!
ಪಶ್ಚಿಮ ಬಂಗಾಳದಲ್ಲಿ ಒಟ್ಟು 294 ಸದಸ್ಯರ ವಿಧಾನಸಭೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ 213 ಸ್ಥಾನ ಗೆದ್ದು ಮೂರನೇ ಸಲ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಈ ವೇಳೆ ಮಮತಾ ಬ್ಯಾನರ್ಜಿ ಸುವೇಂದು ಅಧಿಕಾರಿ ವಿರುದ್ಧ ಸೋಲು ಕಂಡಿದ್ದರು. ತದನಂತರ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.