ದೀನ್‌ಹಟಾ(ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದಲ್ಲಿ ಕಿಡಿಗೇಡಿಗಳ ಅಟ್ಟಹಾಸ ಮುಂದುವರಿದಿದೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಡುವಿನ ರಾಜಕೀಯ ಕೆಸರೆರಚಾಟ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ನಡುವೆ ಟಿಎಂಸಿ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರ ಮನೆಗಳನ್ನು ದ್ವಂಸ ಮಾಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿಸಿತ್ ಪ್ರಮಾಣಿಕ್ ಅವರ ಬೆಂಗಾವಲು ವಾಹನದ ಮೇಲೆ ಶನಿವಾರ ಟಿಎಂಸಿ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ ಬಳಿಕ, ಬಿಜೆಪಿ ಕಾರ್ಯಕರ್ತರ ಮನೆಗಳನ್ನು ಧ್ವಂಸಗೊಳಿಸಿ ಹಿಂಸಾಚಾರ ನಡೆಸಿರುವ ಆರೋಪ ಪ್ರಕರಣ ಭಾನುವಾರ ಕೂಚ್ ಬೆಹಾರ್ ಜಿಲ್ಲೆಯ ದೀನ್‌ಹಟಾನ ಹಲವು ಭಾಗಗಳಲ್ಲಿ ನಡೆದಿದೆ. ಶನಿವಾರ ರಾತ್ರಿ ಬೋರ್ಡಿಂಗ್ ಪಾರಾ ಪ್ರದೇಶದಲ್ಲಿ ಬಿಜೆಪಿಯ ದೀನ್‌ಹಟಾ ನಗರ ಮಂಡಲ ಕಾರ್ಯದರ್ಶಿ ಮುನ್ನಾ ಸಾವಾ ಅವರ ಮನೆಯ ಮುಂದೆ ಗುಂಪೊಂದು ಗಲಾಟೆ ಮಾಡುತ್ತಿರುವುದು ಕಂಡುಬಂದಿದೆ. ಘಟನೆಯಲ್ಲಿ ಸ್ಥಳೀಯ ಟಿಎಂಸಿ ಕಾರ್ಯಕರ್ತರು ಭಾಗಿಯಾಗಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಬಿಜೆಪಿ ಕಾರ್ಯಕರ್ತರು ಇದನ್ನು ವಿರೋಧಿಸಲು ರಸ್ತೆಗಿಳಿಯಬೇಕಾಗುತ್ತದೆ:ಈ ಕುರಿತುಬಿಜೆಪಿಯ ಕೂಚ್ ಬೆಹಾರ್ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಸುಕುಮಾರ್ ರಾಯ್ ಮಾತನಾಡಿ, ನಿಸಿತ್ ಪ್ರಾಮಾಣಿಕ್ ಮೇಲಿನ ದಾಳಿಯ ನಂತರ, ದೀನ್‌ಹಟಾನ ಬಿಜೆಪಿ ಕಾರ್ಯಕರ್ತರ ಮನೆಗಳನ್ನು ಧ್ವಂಸಗೊಳಿಸಲಾಗುತ್ತಿದೆ. ಅನೇಕ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಇದೇ ರೀತಿ ಮುಂದುವರಿದರೆ ಬಿಜೆಪಿ ಕಾರ್ಯಕರ್ತರು ಇದನ್ನು ವಿರೋಧಿಸಲು ರಸ್ತೆಗಿಳಿಯಬೇಕಾಗುತ್ತದೆ. ನಂತರ ಟಿಎಂಸಿ ಕಾಣಸಿಗುವುದಿಲ್ಲ ಎಂದು ಎಚ್ಚರಿಕೆ ರವಾನಿಸಿದ್ದಾರೆ. ಅವರ ಈ ಹೇಳಿಕೆಗೆ ಟಿಎಂಸಿ ನಾಯಕರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.