ಹೌರಾ(ಪಶ್ಚಿಮ ಬಂಗಾಳ):ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತನ ಪತ್ನಿ ಮೇಲೆ ಐವರು ಟಿಎಂಸಿ ಕಾರ್ಯಕರ್ತರು ಅತ್ಯಾಚಾರವೆಸಗಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಆರೋಪಿಗಳ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಬಗ್ನಾನ್ ವಿಧಾನಸಭೆ ಕ್ಷೇತ್ರದ ಅಮ್ಟಾದಲ್ಲಿ ನಿನ್ನೆ ರಾತ್ರಿ 12 ಗಂಟೆಗೆ ಈ ದುಷ್ಕೃತ್ಯ ನಡೆದಿದೆ. ಈ ಘಟನೆ ನಡೆದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತ ಮನೆಯಲ್ಲಿ ಇರಲಿಲ್ಲ ಎಂದು ಹೇಳಲಾಗಿದೆ. ಸದ್ಯ ಆಸ್ಪತ್ರೆಗೆ ದಾಖಲಾಗಿರುವ ಮಹಿಳೆಗೆ ಚಿಕಿತ್ಸೆ ಮುಂದುವರೆದಿದ್ದು, ಮನೆಗೆ ಸೂಕ್ತ ಪೊಲೀಸ್ ಭದ್ರತೆ ನೀಡಲಾಗಿದೆ.
ಬಗ್ನಾನ್ ಪ್ರದೇಶದಲ್ಲಿ ಬಿಜೆಪಿ ಕಾರ್ಯಕರ್ತನ ಪತ್ನಿಯನ್ನ ಕಟ್ಟಿಹಾಕಿರುವ ಕಾಮುಕರು ತದನಂತರ ಆಕೆಯ ಮೇಲೆ ಕ್ರೂರವಾಗಿ ಅತ್ಯಾಚಾರವೆಸಗಿದ್ದಾರೆ ಎನ್ನಲಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಉಸ್ತುವಾರಿ ಅಮಿತ್ ಮಾಳವೀಯ ಟ್ವಿಟರ್ನಲ್ಲಿ ಮಾಹಿತಿ ನೀಡಿ, ಟಿಎಂಸಿ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.
ಸದ್ಯ ಲಭ್ಯವಾಗಿರುವ ಮಾಹಿತಿ ಪ್ರಕಾರ, ಅತ್ಯಾಚಾರಕ್ಕೊಳಗಾಗಿರುವ ಮಹಿಳೆ ಕಳೆದ ಆರು ವರ್ಷಗಳ ಹಿಂದೆ ಮೆದುಳಿನ ಪಾರ್ಶ್ವವಾಯು ಚಿಕಿತ್ಸೆಗೊಳಗಾಗಿದ್ದು, ಅಂದಿನಿಂದಲೂ ಮಾತನಾಡಲು ಬರುವುದಿಲ್ಲ. ಆಕೆಯ ಗಂಡ ಫ್ಲೆಕ್ಸ್, ಬ್ಯಾನರ್ ವ್ಯಾಪಾರ ಮಾಡುತ್ತಿದ್ದು, ಘಟನೆ ನಡೆದಾಗ ಮನೆಯಿಂದ ಹೊರಗಡೆ ಇದ್ದರು. ಇದರ ಸದುಪಯೋಗ ಪಡೆದುಕೊಂಡಿರುವ ಕಾಮುಕರು ದುಷ್ಕೃತ್ಯವೆಸಗಿದ್ದಾರೆ.
ಇದನ್ನೂ ಓದಿರಿ: ಸ್ವರ್ಣ ಪದಕ ಗೆದ್ದಾಗಿನಿಂದಲೂ ಜೇಬಿನಲ್ಲಿಟ್ಟುಕೊಂಡು ತಿರುಗಾಟ: ಚಿನ್ನದ ಹುಡುಗ ನೀರಜ್ ಚೋಪ್ರಾ ಮಾತು!
ರಾಜ್ಯದಲ್ಲಿ ಟಿಎಂಸಿ ಅಧಿಕಾರಕ್ಕೆ ಬಂದಾಗಿನಿಂದಲೂ ಇಂತಹ ಕೃತ್ಯಗಳಲ್ಲಿ ಟಿಎಂಸಿ ಭಾಗಿಯಾಗುತ್ತಿದ್ದು, ಪೊಲೀಸರು ಯಾವುದೇ ರೀತಿಯ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ಟಿಎಂಸಿ ಮುಖ್ಯಸ್ಥ ಪುಲ್ಕಾ ರಾಯ್ ಕೂಡ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದ್ದಾರೆ.
ಘಟನೆ ಬಗ್ಗೆ ಮಾತನಾಡಿರುವ ಆಕೆಯ ಗಂಡ, ’’ನಾನು ಕೆಲಸದ ನಿಮಿತ್ತ ಕೋಲ್ಕತ್ತಾಗೆ ಹೋಗಿದ್ದೇನು. ಈ ವೇಳೆ ನನ್ನ ಹೆಂಡತಿ ಹಾಗೂ ಹಿರಿಯ ಮಗ ಮನೆಯಲ್ಲಿದ್ದರು. ರಾತ್ರಿ 12 ಗಂಟೆಗೆ ಕೆಲ ದುಷ್ಕರ್ಮಿಗಳು ಪತ್ನಿಯ ಹೆಸರು ಕೂಗಿದ್ದು, ಬಾಗಿಲು ತೆರೆದು ಹೊರಗಡೆ ಬರುತ್ತಿದ್ದಂತೆ ದುಷ್ಕೃತ್ಯವೆಸಗಿದ್ದಾರೆ’’. ಇದು ಟಿಎಂಸಿ ಕಾರ್ಯಕರ್ತರ ಕೃತ್ಯವಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.