ಲಖನೌ:ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮೂರು ಹಂತಗಳ ಮತದಾನ ಪ್ರಕ್ರಿಯೆ ಈಗಾಗಲೇ ಮುಗಿದಿದ್ದು, ಇಂದು ನಾಲ್ಕನೇ ಹಂತದ ಮತದಾನ ನಡೆಯುತ್ತಿದೆ. ಈ ಮಧ್ಯೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಬಹುಮತ ಗಳಿಸಲಿದೆ ಎಂದು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಬುಧವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ನಡ್ಡಾ, ತಮ್ಮ ಪಕ್ಷ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ಚುನಾವಣೆಯಲ್ಲಿ ಪ್ರತಿಪಕ್ಷದ ನಾಯಕರಿಗೆ ಗೆಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಪ್ರತಿಪಕ್ಷಗಳು ಸಂಪೂರ್ಣವಾಗಿ ಹತಾಶವಾಗಿವೆ. ಉತ್ತರ ಪ್ರದೇಶದ ಜನರು ಬಿಜೆಪಿಯ ಡಬಲ್ ಎಂಜಿನ್ ಸರ್ಕಾರದ ಕೆಲಸದಿಂದ ಸಂಪೂರ್ಣವಾಗಿ ತೃಪ್ತರಾಗಿದ್ದಾರೆ. ಭಾರಿ ಬಹುಮತದೊಂದಿಗೆ ಮತ್ತೊಮ್ಮೆ ನಮ್ಮ ಸರ್ಕಾರ ರಚನೆಯಾಗಲಿದೆ ಎಂದು ಹೇಳಿದರು.
ಬಿಜೆಪಿಯ ಪರವಾಗಿ ಮತದಾರರ ಉತ್ಸಾಹ ನೋಡಿದ್ದೇನೆ. ಅಭಿವೃದ್ಧಿ, ಭದ್ರತೆ ಮತ್ತು ಸಮೃದ್ಧಿಗಾಗಿ ನಮ್ಮ ಪಕ್ಷಕ್ಕೆ ಮತ ಚಲಾಯಿಸಲು ಜನರು ಮನಸು ಮಾಡಿದ್ದಾರೆ. ಬಡವರು, ಮಹಿಳೆಯರು ಮತ್ತು ಯುವಕರ ಸಬಲೀಕರಣಕ್ಕಾಗಿ ಬಿಜೆಪಿ ಕೆಲಸ ಮಾಡಿದೆ ಎಂದು ನಡ್ಡಾ ಹೇಳಿದರು. ಜೊತೆಗೆ ಅಭಿವೃದ್ಧಿ ಕಾರ್ಯಗಳಿಗಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಶ್ಲಾಘಿಸಿದರು.