ಲಖನೌ(ಉತ್ತರ ಪ್ರದೇಶ): ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಘೋಷಣೆಯಾದಾಗಿನಿಂದಲೂ ಆಡಳಿತ ಪಕ್ಷ ಬಿಜೆಪಿಗೆ ಒಂದರ ಹಿಂದೆ ಒಂದರಂತೆ ಹೊಡೆತ ಬೀಳುತ್ತಿದೆ. ಕೆಲವು ಸಚಿವರೂ ಸೇರಿದಂತೆ ಶಾಸಕರು ಕಮಲ ಪಕ್ಷ ತೊರೆದಿದ್ದಾರೆ. ಇದರಲ್ಲಿ ಬಹುತೇಕರು ಸಮಾಜವಾದಿ ಪಕ್ಷ ಸೇರ್ಪಡೆಯಾಗ್ತಿದ್ದು ಇಂದು ಬೃಹತ್ ಸಮಾರಂಭ ಆಯೋಜಿಸಲಾಗಿತ್ತು.
ಬಿಜೆಪಿಯಿಂದ ಹೊರಬಂದಿರುವ ಸ್ವಾಮಿ ಪ್ರಸಾದ್ ಮೌರ್ಯ, ಧರಂ ಸಿಂಗ್ ಸೈನಿ, ಭಗವತಿ ಸಾಗರ್, ವಿನಯ್ ಶಕ್ಯ ಸೇರಿದಂತೆ ಅನೇಕರು ಅಖಿಲೇಶ್ ಯಾದವ್ ಸಮ್ಮುಖದಲ್ಲಿಂದು ಸಮಾಜವಾದಿ ಪಕ್ಷ ಸೇರಿಕೊಂಡರು.
ಈ ವೇಳೆ ಮಾತನಾಡಿರುವ ಅಖಿಲೇಶ್ ಯಾದವ್, ಉತ್ತರ ಪ್ರದೇಶದಲ್ಲಿ ಬಿಜೆಪಿಯ ವಿಕೆಟ್ಗಳು ಒಂದರ ಹಿಂದೆ ಒಂದರಂತೆ ಬೀಳುತ್ತಿವೆ, ಆದರೂ ನಮ್ಮ ಸಿಎಂಗೆ ಕ್ರಿಕೆಟ್ ಆಡುವುದು ಗೊತ್ತಿಲ್ಲ. ಸ್ವಾಮಿ ಪ್ರಸಾದ್ ಮೌರ್ಯ ಅವರು ಹೋದಲ್ಲೆಲ್ಲಾ ಸರ್ಕಾರ ರಚನೆಯಾಗಿದೆ. ಈ ಬಾರಿಯೂ ತಮ್ಮೊಂದಿಗೆ ಅಪಾರ ನಾಯಕರನ್ನು ಕರೆತಂದಿದ್ದಾರೆ ಎಂದರು.
ಡಿಜಿಟಲ್ ಇಂಡಿಯಾ ದೋಷ ಮರೆಯಲು ಯಾರಿಂದಲೂ ಸಾಧ್ಯವಿಲ್ಲ. ಕಾನ್ಪುರದ ಐಟಿ ದಾಳಿ ಬೇರೆ ಕಡೆ ನಡೆಯಬೇಕಿತ್ತು. ಆದರೆ, ಮಿಸ್ ಆಗಿ ಅವರ ಮನೆಯಲ್ಲೇ ನಡೆದಿದೆ ಎಂದರು.