ಭೋಪಾಲ್ (ಮಧ್ಯಪ್ರದೇಶ): ಗ್ವಾಲಿಯರ್-ಚಂಬಲ್ನ ಕ್ಷೇತ್ರಗಳು ಮಧ್ಯಪ್ರದೇಶದ ರಾಜಕೀಯದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಅಷ್ಟಕ್ಕೂ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಜ್ಯೋತಿರಾದಿತ್ಯ ಸಿಂಧಿಯಾ ಅವರ ಪ್ರಭಾವ ಇರುವ ಪ್ರದೇಶವಿದು. ಆದರೆ ಕಾಂಗ್ರೆಸ್ ಈ ಪ್ರದೇಶಗಳಲ್ಲಿ ಸಿಂಧಿಯಾ ಅವರ ಪ್ರಭಾವ ನಡೆಯುವುದಿಲ್ಲ ಎಂದು ಆರೋಪ ಮಾಡಿತ್ತು. ಆದರೆ ಚುನಾವಣಾ ಫಲಿತಾಂಶದ ಮೂಲಕ ಸಿಂಧಿಯಾ ತಮ್ಮ ಪ್ರಭಾವ ಏನು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಗ್ವಾಲಿಯರ್ನ ನಾಲ್ಕು ಕ್ಷೇತ್ರಗಳಲ್ಲಿ ಕಳೆದ ಬಾರಿ ಅಂದರೆ 2018 ರಲ್ಲಿ ಬಿಜೆಪಿ ಗೆದ್ದಿದ್ದು ಕೇವಲ ಒಂದು ಸ್ಥಾನ ಮಾತ್ರ. ಆದರೆ ಈ ಸಲ ಬಿಜೆಪಿ ಆ ಎಲ್ಲ ಕ್ಷೇತ್ರಗಳನ್ನು ತನ್ನ ಮಡಿಲಿಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ವಿಶೇಷ ಎಂದರೆ ಕಳೆದ ಬಾರಿ ಸಿಂಧಿಯಾ ಕಾಂಗ್ರೆಸ್ ನೇತಾರರಾಗಿದ್ದರು. ಅದು ಈ ಬಾರಿ ಉಲ್ಟಾ ಆಗಿದೆ. ಈಗ ಅವರು ಬಿಜೆಪಿ ನೇತಾರ. 2018ರಲ್ಲಿ ದಿಲೀಪ್ ಕುಮಾರ್ ವಿರ್ಜಿ ಠಾಕೂರ್ ಗ್ವಾಲಿಯರ್ ದಕ್ಷಿಣ ಕ್ಷೇತ್ರದಿಂದ ಬಿಜೆಪಿ ಪರ ಗೆದ್ದ ಏಕೈಕ ಶಾಸಕರಾಗಿದ್ರು. ಉಳಿದ ಮೂರು ಅಂದರೆ, ಗ್ವಾಲಿಯರ್ ಪೂರ್ವ, ಗ್ವಾಲಿಯರ್ ಗ್ರಾಮೀಣ ಮತ್ತು ಗ್ವಾಲಿಯರ್ ಕಾಂಗ್ರೆಸ್ ಪಾಲಾಗಿತ್ತು. ಈ ಎಲ್ಲ ಕ್ಷೇತ್ರಗಳು ಕೇಸರಿ ಬತ್ತಳಿಕೆ ಸೇರಿವೆ.
ಕಳೆದ ಸಲ ಸಿಂಧಿಯಾ ಪ್ರಭಾವದಿಂದಾಗಿ ಕಾಂಗ್ರೆಸ್ ಗ್ವಾಲಿಯರ್ - ಚಂಬಲ್ ಪ್ರದೇಶಗಳಲ್ಲಿ ಹೆಚ್ಚಿನ ಕ್ಷೇತ್ರಗಳನ್ನು ವಶಕ್ಕೆ ಪಡೆದುಕೊಂಡಿತ್ತು. ಸಿಂಧಿಯಾ ಪಕ್ಷಾಂತರ ಆದ ನಂತರ ಅವರ ಪ್ರಭಾವ ಈ ಕ್ಷೇತ್ರಗಳಲ್ಲಿ ನಡೆಯಲಿದೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲೂ ಚರ್ಚೆಯಾದ ವಿಷಯ. 2023ರ ಚುನಾವಣೆಯಲ್ಲಿ ಗ್ವಾಲಿಯರ್ - ಚಂಬಲ್ ಪ್ರದೇಶವನ್ನು ಬಿಜೆಪಿಗೆ ತಂದುಕೊಡುವಲ್ಲಿ ಸಿಂಧಿಯಾ ಯಶಸ್ವಿ ಆದಂತೆ ಕಾಣುತ್ತಿದೆ.
2018ರ ಕಾಂಗ್ರೆಸ್ ಗೆಲುವಿಗೆ ಒಂದು ದೊಡ್ಡ ಕಾರಣವೆಂದರೆ ಸಿಂಧಿಯ ಭದ್ರಕೋಟೆಯಾದ ಚಂಬಲ್-ಗ್ವಾಲಿಯರ್ ಪ್ರದೇಶದಲ್ಲಿ ಹೆಚ್ಚಿನ ಕ್ಷೇತ್ರಗಳನ್ನು ಜಯಿಸಿದ್ದು. ಕಾಂಗ್ರೆಸ್ ಅಂದು ಸಿಂಧಿಯಾ ಅವರ ಛಾಯೆಯಿಂದ 34 ಸ್ಥಾನಗಳಲ್ಲಿ 26 ಸ್ಥಾನಗಳನ್ನು ಗೆದ್ದಿತ್ತು. 2013ರಲ್ಲಿ 12 ಮತ್ತು 2008 ರಲ್ಲಿ 13 ಸ್ಥಾನಗಳು ಕಾಂಗ್ರೆಸ್ ಪಾಲಾಗಿದ್ದವು, ಬಿಜೆಪಿಯ ಕ್ರಮವಾಗಿ 20 ಮತ್ತು 16ಗೆ ಸ್ಥಾನಗಳನ್ನು ಪಡೆದುಕೊಂಡಿತ್ತು.