ಭೋಪಾಲ್:ದೇಶದಲ್ಲಿ ಸಾರ್ವಜನಿಕರು ಆಡಳಿತ ಪಕ್ಷ ಬಿಜೆಪಿ ಮೇಲೆ ಆಕ್ರೋಶ ಹೊರಹಾಕುತ್ತಿದ್ದರೂ ಅದು ತಲೆ ಕೆಡಿಸಿಕೊಳ್ಳುತ್ತಿಲ್ಲ. ಕಾರಣ ಅದು ಚುನಾವಣೆಗಳಲ್ಲಿ ಇವಿಎಂಗಳ ಮೇಲೆ ಅವಲಂಬಿತವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ಕೃಷಿ ಕಾಯ್ದೆ, ತೈಲ ಬೆಲೆ ಹಾಗೂ ಎಲ್ಪಿಜಿ ಬೆಲೆ ಏರಿಕೆಯಾಗುತ್ತಿದ್ದು, ಇದರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಇವುಗಳ ಬಗ್ಗೆ ಕೇಂದ್ರ ಬಿಜೆಪಿ ಸರ್ಕಾರ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ರಾಮ ಮಂದಿರಕ್ಕಾಗಿ ಮನೆ ಮನೆ ದೇಣಿಗೆ ಸಂಗ್ರಹ ಮುಕ್ತಾಯ: ಮೂರು ವರ್ಷಗಳಲ್ಲಿ ಭವ್ಯ ದೇಗುಲ!
ಚುನಾವಣೆಗಳಲ್ಲಿ ಬಿಜೆಪಿಗೆ ಇವಿಎಂಗಳು ಸಹಾಯ ಮಾಡುವ ಕಾರಣ ಜನರ ಸಮಸ್ಯೆ ಬಗ್ಗೆ ಅದು ಮಾತನಾಡುತ್ತಿಲ್ಲ ಎಂದಿರುವ ಕಾಂಗ್ರೆಸ್ ಮುಖಂಡ, ಸಾರ್ವಜನಿಕರಿಂದ ಈ ರೀತಿ ಆಕ್ರೋಶ ವ್ಯಕ್ತವಾದರೆ ರಾಜಕಾರಣಿಗಳು ಆತಂಕಕ್ಕೊಳಗಾಗುತ್ತಾರೆ. ಆದರೆ, ಬಿಜೆಪಿ ಮಾತ್ರ ಇದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಬೆಲೆ 594 ರಿಂದ 890ಕ್ಕೆ ಏರಿಕೆಯಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ತೈಲ ಬೆಲೆ ಮೇಲಿನ ಅಬಕಾರಿ ಶೇ.10ರಷ್ಟು ಹೆಚ್ಚಾಗಿದೆ ಎಂದು ಅವರು ಹೇಳಿದ್ದು, ಇದರಿಂದ ಸಾರ್ವಜನಿಕರಿಗೆ ಸಂಕಟವಾಗುತ್ತಿದೆ ಎಂದಿದ್ದಾರೆ.
ಕೃಷಿ ಕಾಯ್ದೆಗಳ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಇಂದಿಗೆ 100 ದಿನ ಪೂರೈಕೆ ಮಾಡಿದ್ದು, ಇದೇ ವಿಚಾರವನ್ನಿಟ್ಟುಕೊಂಡು ಕೇಂದ್ರದ ಮೇಲೆ ವಿವಿಧ ವಿಪಕ್ಷ ನಾಯಕರು ಹರಿಹಾಯ್ದಿದ್ದಾರೆ.