ನವದೆಹಲಿ:ಮುಂದಿನ ವರ್ಷ ಉತ್ತರ ಪ್ರದೇಶ, ಪಂಜಾಬ್ ಸೇರಿದಂತೆ ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದಕ್ಕಾಗಿ ಭಾರತೀಯ ಜನತಾ ಪಾರ್ಟಿ ಈಗಿನಿಂದಲೇ ಮಹತ್ವದ ತಯಾರಿ ನಡೆಸಿದೆ. ಅದೇ ಕಾರಣಕ್ಕಾಗಿ ದೆಹಲಿಯಲ್ಲಿಂದು ಮಹತ್ವದ ಸಭೆ ನಡೆಸಿತು.
2022ರಲ್ಲಿ ಪಂಚರಾಜ್ಯ ಚುನಾವಣೆ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೃಷಿ ಖಾತೆ ಸಚಿವ ನರೇಂದ್ರ ಸಿಂಗ್ ತೋಮರ್, ಸ್ಮೃತಿ ಇರಾನಿ ಹಾಗೂ ಕಿರಣ್ ರಿಜಿಜು ಭಾಗಿಯಾಗಿದ್ದರು. ಮುಂದಿನ ವರ್ಷ ನಡೆಯಲಿರುವ ಚುನಾವಣೆಯ ಬಿಜೆಪಿ ಕಾರ್ಯಸೂಚಿ ಕುರಿತು ಮಹತ್ವದ ಸಭೆ ನಡೆಸಿರುವುದಾಗಿ ತಿಳಿದು ಬಂದಿದೆ.
ಇದನ್ನೂ ಓದಿರಿ: ರಾಮನಾಥ್ ಕೋವಿಂದ್ ಆಗಮನ ವೇಳೆ ಟ್ರಾಫಿಕ್ ಜಾಮ್: ಆ್ಯಂಬುಲೆನ್ಸ್ನಲ್ಲಿ ಪ್ರಾಣ ಬಿಟ್ಟ ಮಹಿಳೆ
ಐದು ರಾಜ್ಯಗಳಲ್ಲಿನ ಸಮಸ್ಯೆ, ಕೋವಿಡ್ ಸಮಸ್ಯೆ, ಲಸಿಕೆ ನೀಡುವ ವಿಚಾರ ಹಾಗೂ ಯಾವ ರೀತಿಯಾಗಿ ಚುನಾವಣೆ ನಡೆಸಬೇಕು ಎಂಬುದು ಇಂದಿನ ಸಭೆಯಲ್ಲಿ ಚರ್ಚೆಯಾಗಿದೆ. ಮುಂದಿನ ವರ್ಷ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಮಣಿಪುರ ಹಾಗೂ ಗೋವಾದಲ್ಲಿ ಚುನಾವಣೆ ನಡೆಯಲಿವೆ.
ಪಂಜಾಬ್ ಹೊರತುಪಡಿಸಿ ಎಲ್ಲ ರಾಜ್ಯಗಳಲ್ಲೂ ಬಿಜೆಪಿ ಅಧಿಕಾರವಿದೆ. ಈ ವರ್ಷ ಕೂಡ ಪಂಚರಾಜ್ಯ ಚುನಾವಣೆ ನಡೆದಿದ್ದು, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರ ರಚನೆ ಮಾಡುವಲ್ಲಿ ವಿಫಲಗೊಂಡಿದ್ದರೂ, ಗಮನಾರ್ಹ ಸಾಧನೆ ಮಾಡಿದೆ. ಆದರೆ ತಮಿಳುನಾಡು, ಕೇರಳದಲ್ಲಿ ಹೀನಾಯ ಸೋಲು ಕಂಡಿದೆ.