ಲಖನೌ(ಉತ್ತರ ಪ್ರದೇಶ): 255 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಭಾರತೀಯ ಜನತಾ ಪಾರ್ಟಿ ಉತ್ತರ ಪ್ರದೇಶದಲ್ಲಿ ಎರಡನೇ ಅವಧಿಗೆ ಸರ್ಕಾರ ರಚನೆ ಮಾಡುವ ಕಸರತ್ತು ನಡೆಸುತ್ತಿದೆ. ಇದರ ಜೊತೆಗೆ ಚುನಾವಣೆ ವೇಳೆ ಘೋಷಣೆ ಮಾಡಿದ್ದ ಪ್ರಣಾಳಿಕೆಯಲ್ಲಿನ ಭರವಸೆ ಈಡೇರಿಸಲು ಮುಂದಾಗಿದೆ.
ಚುನಾವಣೆ ವೇಳೆ ಲೋಕ ಕಲ್ಯಾಣ ಸಂಕಲ್ಪ ಎಂಬ ಪ್ರಣಾಳಿಕೆ ರಿಲೀಸ್ ಮಾಡಿದ್ದ ಬಿಜೆಪಿ ಉಜ್ವಲ ಯೋಜನೆಯಡಿ ಪ್ರತಿ ವರ್ಷ ಕುಟುಂಬವೊಂದಕ್ಕೆ ಮೂರು ಸಿಲಿಂಡರ್ ಉಚಿತವಾಗಿ ನೀಡುವುದಾಗಿ ಘೋಷಣೆ ಮಾಡಿತ್ತು. ಅದರ ಪ್ರಕಾರ ಇದೀಗ ಹೋಳಿ ಹಬ್ಬದಿಂದ ಈ ಯೋಜನೆಯನ್ನು ಜನರಿಗೆ ತಲುಪಿಸುವ ನಿರ್ಧಾರ ಕೈಗೊಂಡಿದೆ ಎಂಬ ಮಾತು ಮೂಲಗಳಿಂದ ತಿಳಿದುಬಂದಿದೆ.
ಮಾರ್ಚ್ 17-18ರಂದು ಸಭೆ ನಡೆಸಲು ಬಿಜೆಪಿ ಮುಂದಾಗಿದ್ದು, ಉಜ್ವಲ ಯೋಜನೆಯ ಫಲಾನುಭವಿಗಳಿಗೆ 1000 ಕೋಟಿ ರೂ. ಮೀಸಲಿಡಲು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಬಿಜೆಪಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವ ಎಲ್ಲ ಭರವಸೆ ಈಡೇರಿಸಲು ಉತ್ತರ ಪ್ರದೇಶ ಮುಖ್ಯ ಕಾರ್ಯದರ್ಶಿ ದುರ್ಗಾಶಂಕರ್ ಮಿಶ್ರಾ ಈಗಾಗಲೇ ಸಕ್ರಿಯರಾಗಿ ಕೆಲಸ ಮಾಡ್ತಿದ್ದಾರೆಂದು ಹೇಳಲಾಗ್ತಿದೆ.