ಹೈದರಾಬಾದ್: ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಚಪ್ಪಲಿ ಹಾಕಿಕೊಳ್ಳಲು ಸಹಾಯ ಮಾಡಿದ ಘಟನೆಯು ಈಗ ಸಾಕಷ್ಟು ರಾಜಕೀಯ ಟೀಕೆ- ಪ್ರತಿಟೀಕೆಗಳಿಗೆ ಗುರಿಯಾಗಿದೆ. ಸಚಿವ ಅಮಿತ್ ಶಾ ಭಾನುವಾರ ಸಿಕಂದರಾಬಾದ್ನ ಮಹಾಂಕಾಳಿ ಅಮ್ಮನವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ದೇವರ ದರ್ಶನ ಪಡೆದು ದೇವಸ್ಥಾನದಿಂದ ಹೊರಬಂದ ಅವರನ್ನು ಬಂಡಿ ಸಂಜಯ ಹಿಂಬಾಲಿಸಿದ್ದರು. ಈ ಸಮಯದಲ್ಲಿ ಬಂಡಿ ಸಂಜಯ, ಶಾ ಅವರ ಚಪ್ಪಲಿಗಳನ್ನು ಎತ್ತಿ ತಂದು ಅವರ ಕಾಲ ಬಳಿ ಇಟ್ಟಿರುವ ಘಟನೆ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಅಮಿತ್ ಶಾ ಚಪ್ಪಲಿ ಎತ್ತಿ ಕೊಟ್ಟ ಬಿಜೆಪಿ ರಾಜ್ಯಾಧ್ಯಕ್ಷ: ಸ್ವಾಭಿಮಾನದ ಪ್ರಶ್ನೆ ಎತ್ತಿದ ಟಿಆರ್ಎಸ್ - ಚಪ್ಪಲಿ ತೊಡಿಸುವುದು ತೆಲಂಗಾಣದ ಸ್ವಾಭಿಮಾನ
ಕೇಂದ್ರ ಸಚಿವ ಅಮಿತ್ ಶಾ ಚಪ್ಪಲಿ ಎತ್ತಿ ಕೊಟ್ಟ ಬಂಡಿ ಸಂಜಯ. ಬಿಜೆಪಿಯವರು ಗುಜರಾತಿಗಳ ಗುಲಾಮರೆಂದ ಪ್ರತಿಪಕ್ಷಗಳು. ರಾಜಕೀಯ ಕಾವು ಪಡೆದುಕೊಳ್ಳುತ್ತಿರುವ ಚಪ್ಪಲಿ ಪ್ರಕರಣ.
ಬಂಡಿ ಸಂಜಯ ಅವರ ವರ್ತನೆಯನ್ನು ಕಟುವಾಗಿ ಟೀಕಿಸಿರುವ ತೆಲಂಗಾಣ ರಾಷ್ಟ್ರ ಸಮಿತಿ, ಗುಜರಾತ್ ನಾಯಕರಿಗೆ ಚಪ್ಪಲಿ ತೊಡಿಸುವುದು ತೆಲಂಗಾಣದ ಸ್ವಾಭಿಮಾನವೇ ಎಂದು ಪ್ರಶ್ನಿಸಿ ಟ್ವೀಟ್ ಮಾಡಿದೆ. ದೆಹಲಿಯ ಶೂಗಳನ್ನು ಹೊತ್ತ ಗುಜರಾತಿ ಗುಲಾಮರನ್ನು ತೆಲಂಗಾಣ ರಾಜ್ಯವು ಗಮನಿಸುತ್ತಿದೆ. ತೆಲಂಗಾಣದ ಸ್ವಾಭಿಮಾನವನ್ನು ಕೆಣಕುವವರನ್ನು ಹಿಮ್ಮೆಟ್ಟಿಸಲು ತೆಲಂಗಾಣ ಸಿದ್ಧವಾಗಿದೆ ಎಂದು ಈ ಟ್ವೀಟ್ ಅನ್ನು ಪೋಣಿಸಿ ಕೆಟಿಆರ್ ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ವಕ್ತಾರ ಅಡ್ನಾಕಿ ದಯಾಕರ್ ಕೂಡ ಈ ಘಟನೆಗೆ ಪ್ರತಿಕ್ರಿಯಿಸಿದ್ದು, ಬಂಡಿ ಸಂಜಯ್ ತೆಲಂಗಾಣದ ಸ್ವಾಭಿಮಾನವನ್ನು ಪಣಕ್ಕಿಟ್ಟಿದ್ದಾರೆ ಎಂದು ಹೇಳಿದ್ದಾರೆ.