ನವದೆಹಲಿ:ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕೇರಳದಲ್ಲಿ ನಿಂತು ಒಡೆದಾಳುವ ನೀತಿ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಸೇರಿದಂತೆ ಭಾರತೀಯ ಜನತಾ ಪಕ್ಷದ ನಾಯಕರು ವಾಗ್ದಾಳಿ ನಡೆಸಿದ್ದಾರೆ.
ಮತದಾನದ ಕೇರಳದಲ್ಲಿ 'ಐಶ್ವರ್ಯ ಕೇರಳ ಯಾತ್ರೆ' ಮುಕ್ತಾಯ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ್ದ ರಾಹುಲ್, ಕಳೆದ 15 ವರ್ಷಗಳಿಂದ ಉತ್ತರ ಭಾರತದಲ್ಲಿ ಸಂಸದನಾಗಿರುವ ನಾನು ಬೇರೆ ರೀತಿಯ ರಾಜಕೀಯಕ್ಕೆ ಒಗ್ಗಿಕೊಂಡಿದ್ದೆ. ಆದರೆ ಕೇರಳಕ್ಕೆ ಆಗಮಿಸಿದ ನನಗೆ ಉತ್ಸಾಹ ಹೆಚ್ಚಿಸಿ, ನನ್ನನ್ನು ಉಲ್ಲಾಸವನ್ನುಂಟು ಮಾಡಿದೆ. ಇಲ್ಲಿನ ಜನರು ಸಮಸ್ಯೆಗಳನ್ನು ಆಳವಾಗಿ ತಿಳಿದುಕೊಂಡಿದ್ದಾರೆ ಮತ್ತು ಪರಿಹಾರ ಹುಡುಕುತ್ತಿದ್ದಾರೆ ಎಂದಿದ್ದರು. ಈ ಹೇಳಿಕೆ ಮೂಲಕ ಗಾಂಧಿ ಕುಟುಂಬಕ್ಕೆ ರಾಜಕೀಯ ಭದ್ರ ಬುನಾದಿ ಹಾಕಿದ ಅಮೇಥಿ ಹಾಗೂ ಉತ್ತರ ಭಾರತವನ್ನು ತೆಗಳಿದ್ದಾರೆ ಎಂದು ಬಿಜೆಪಿ ನಾಯಕರು ರಾಹುಲ್ ವಿರುದ್ಧ ಕಿಡಿಕಾರಿದ್ದಾರೆ.
ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಗಾಂಧಿಯವರು "ಉತ್ತರದ ವಿರುದ್ಧ ವಿಷವನ್ನು ಹೊರಹಾಕುತ್ತಿದ್ದಾರೆ" ಎಂದು ಆರೋಪಿಸಿದ್ದಾರೆ. ಕೆಲವು ದಿನಗಳ ಹಿಂದೆ ಅವರು ಈಶಾನ್ಯ ರಾಜ್ಯಗಳಿಗೆ ತೆರಳಿದ್ದಾಗ, ಭಾರತದ ಪಶ್ಚಿಮ ಭಾಗದ ವಿರುದ್ಧ ವಿಷ ಹೊರಹಾಕಿದ್ದರು. ಇಂದು ದಕ್ಷಿಣದಲ್ಲಿ ಅವರು ಉತ್ತರದ ವಿರುದ್ಧ ವಿಷವನ್ನು ಚೆಲ್ಲುತ್ತಿದ್ದಾರೆ. ವಿಭಜನೆ ಮತ್ತು ಆಡಳಿತ ರಾಜಕೀಯ ಕೆಲಸ ಮಾಡುವುದಿಲ್ಲ, ರಾಹುಲ್ ಗಾಂಧಿ ಜಿ! ”ಎಂದು ನಡ್ಡಾ ಟ್ವೀಟ್ ಮೂಲಕ ಕುಟುಕಿದ್ದಾರೆ.
ರಾಹುಲ್ ಹೇಳಿಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ದೇಶದಲ್ಲಿ "ಉತ್ತರ-ದಕ್ಷಿಣ" ವಿಭಜನೆಯನ್ನು ಸೃಷ್ಟಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.