ನವದೆಹಲಿ:ಪೆಗಾಸಸ್ ಸದ್ಯ ಹೆಚ್ಚು ಸದ್ದು ಮಾಡುತ್ತಿರುವ ವಿಷಯ. ಇಸ್ರೇಲ್ ಮೂಲದ ಪೆಗಾಸಸ್ ಎಂಬ ಸ್ಪೈವೇರ್ ಅಪ್ಲಿಕೇಶನ್ ಮೂಲಕ ಕೇಂದ್ರ ಸರ್ಕಾರ ಕೆಲವರ ಮೊಬೈಲ್ ಹ್ಯಾಕ್ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಆದರೆ ಕಾಂಗ್ರೆಸ್ ಆರೋಪವನ್ನು ಬಿಜೆಪಿ ಸಂಪೂರ್ಣವಾಗಿ ತಳ್ಳಿ ಹಾಕಿದೆ.
ಪೆಗಾಸಸ್ ಆರೋಪ: ರವಿಶಂಕರ್ ಪ್ರಸಾದ್ ಮಾಹಿತಿ ಇದೇ ವಿಷಯವಾಗಿ ಸುದ್ದಿಗೋಷ್ಠಿ ನಡೆಸಿರುವ ಕೇಂದ್ರದ ಮಾಜಿ ಐಟಿ ಸಚಿವ ರವಿಶಂಕರ್ ಪ್ರಸಾದ್, 45ಕ್ಕೂ ಹೆಚ್ಚಿನ ದೇಶಗಳು ಪೆಗಾಸಸ್ ಬಳಕೆ ಮಾಡುತ್ತಿರುವಾಗ ಭಾರತವನ್ನು ಮಾತ್ರ ಏಕೆ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಮೊಬೈಲ್ ಫೋನ್ ಹ್ಯಾಕ್ ಮಾಡಿರುವುದರಲ್ಲಿ ಆಡಳಿತ ಪಕ್ಷದ ಪಾತ್ರವಿದೆ ಎಂದು ಹೇಳುವುದಕ್ಕೆ ವಿರೋಧ ಪಕ್ಷದ ಬಳಿ ಒಂದೇ ಒಂದು ಚಿಕ್ಕ ಸಾಕ್ಷಿ ಕೂಡ ಇಲ್ಲ. ಈ ಸುದ್ದಿ ಬ್ರೇಕ್ ಮಾಡಿರುವ 'ದಿ ವೈರ್' ಈ ಹಿಂದೆ ಕೂಡ ಅನೇಕ ತಪ್ಪು ಸುದ್ದಿ ಬಿತ್ತರಿಸಿರುವ ಉದಾಹರಣೆಗಳಿವೆ ಎಂದಿದ್ದಾರೆ. 50 ವರ್ಷ ದೇಶದಲ್ಲಿ ಆಡಳಿತ ನಡೆಸಿರುವ ಪಕ್ಷವೊಂದು ಈ ರೀತಿಯ ಕೀಳುಮಟ್ಟದ ರಾಜಕೀಯ ಮಾಡುತ್ತಿರುವುದು ನಿಜಕ್ಕೂ ಆಘಾತಕಾರಿ ಎಂದಿದ್ದಾರೆ.
ಇದನ್ನೂ ಓದಿ: 'ಪೆಗಾಸಸ್' ಫೋನ್ ನಂಬರ್ ಹ್ಯಾಕ್: ಮೋದಿ ತನಿಖೆಗೊಳಪಡಲಿ, ಶಾ ರಾಜೀನಾಮೆ ನೀಡಲಿ- ಕಾಂಗ್ರೆಸ್ ಪಟ್ಟು
ಮುಂಗಾರು ಅಧಿವೇಶನ ಆರಂಭಗೊಳ್ಳುವುದಕ್ಕೂ ಕೆಲ ನಿಮಿಷಗಳ ಮುಂಚೆ ಈ ಸುದ್ದಿ ಬಹಿರಂಗಗೊಂಡಿದೆ. ಇದರ ಹಿಂದಿರುವ ಹುನ್ನಾರ ಏನು? ಎಂದು ಪ್ರಶ್ನೆ ಮಾಡಿರುವ ರವಿಶಂಕರ್ ಪ್ರಸಾದ್, ಲೋಕಸಭೆ ಸದನ ನಡೆಸಲು ಅವಕಾಶ ನೀಡುವ ಬದಲು ಇಂತಹ ಸುಳ್ಳು ವರದಿಯನ್ನಿಟ್ಟುಕೊಂಡು ಪ್ರತಿಭಟನೆ ಮಾಡ್ತಿವೆ ಎಂದಿದ್ದಾರೆ. ಅವರ ಬಳಿ ಯಾವುದೇ ರೀತಿಯ ಸಾಕ್ಷ್ಯಗಳಿಲ್ಲ. ಇದಕ್ಕೆ ಸಂಬಂಧಿಸಿದಂತೆ ಪೆಗಾಸಸ್ ಈಗಾಗಲೇ ಸ್ಪಷ್ಟನೆ ಸಹ ನೀಡಿದ್ದು, ಕೇಂದ್ರ ಸರ್ಕಾರದ ಮೇಲೆ ಸುಳ್ಳು ಆಪಾದನೆ ಮಾಡುವ ಉದ್ದೇಶದಿಂದ ಕಾಂಗ್ರೆಸ್ ಈ ರೀತಿಯಾಗಿ ನಡೆದುಕೊಳ್ಳುತ್ತಿದೆ ಎಂದಿದ್ದಾರೆ.
ಕಾಂಗ್ರೆಸ್ ಆರೋಪ ಮಾಡಿರುವ ಪ್ರಕಾರ ರಾಹುಲ್ ಗಾಂಧಿ, ಪ್ರಶಾಂತ್ ಕಿಶೋರ್ ಸೇರಿದಂತೆ 40ಕ್ಕೂ ಹೆಚ್ಚು ಪತ್ರಕರ್ತರ ಪೋನ್ ಹ್ಯಾಕ್ ಮಾಡಲಾಗಿದೆ ಎನ್ನಲಾಗಿದೆ. ಆದರೆ ಈ ಆರೋಪವನ್ನ ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಸಂಪೂರ್ಣವಾಗಿ ತಳ್ಳಿ ಹಾಕಿದ್ದಾರೆ. ಇದೇ ವಿಷಯವನ್ನಿಟ್ಟುಕೊಂಡು ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮೋದಿ ನೇತೃತ್ವದ ಸರ್ಕಾರ ದೇಶದ ಹಿತಾಸಕ್ತಿಗೋಸ್ಕರ ಕೆಲಸ ಮಾಡ್ತಿದ್ದು, ಫೋನ್ ಟ್ಯಾಪಿಂಗ್ ಮಾಡುವಂತಹ ಕೀಳು ಮಟ್ಟದಲ್ಲಿ ನಾವಿಲ್ಲ ಎಂದಿದ್ದಾರೆ.