ಹೈದರಾಬಾದ್: ತೆಲಂಗಾಣ ಮತ್ತು ಪಶ್ಚಿಮ ಬಂಗಾಳದಲ್ಲಿ ಕುಟುಂಬ ರಾಜಕಾರಣವನ್ನು ಕೊನೆಗೊಳಿಸಲು ಬಿಜೆಪಿ ನಿರ್ಧರಿಸಿದೆ. ಬಿಜೆಪಿ ತೆಕ್ಕೆಯಿಂದ ದೂರ ಉಳಿದಿರುವ ಇತರೆ ರಾಜ್ಯಗಳಲ್ಲೂ ಸಹ ಸರ್ಕಾರ ರಚಿಸಲು ನಿರ್ಧರಿಸಿದ್ದು, ದೇಶ ಮೊದಲು ಎನ್ನುವ ಏಕೈಕ ವಿಚಾರಧಾರೆ ನಮ್ಮದು. ತುಷ್ಟೀಕರಣ ನೀತಿಯನ್ನು ಅಂತ್ಯಗೊಳಿಸಿ ಸಂತುಷ್ಟಿಯ ಕಡೆಗೆ ಸಾಗುವ ಮಾರ್ಗವನ್ನು ಆಯ್ದುಕೊಂಡಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಮೋದಿ, ವಿರೋಧ ಪಕ್ಷಗಳು ತುಷ್ಟೀಕರಣ ರಾಜಕಾರಣ ಮಾಡುತ್ತಿವೆ. ತುಷ್ಟೀಕರಣ ನೀತಿಯಿಂದಾಗಿ ಭಾರತವನ್ನು ಹಲವು ಸಮಸ್ಯೆಗಳು ಕಾಡುತ್ತಿವೆ. ದೇಶವನ್ನು "ತುಷ್ಟೀಕರಣ"ದಿಂದ "ಸಂತುಷ್ಟಿ"ಕಡೆ ಕೊಂಡೊಯ್ಯಬೇಕು ಎನ್ನುವುದು ಬಿಜೆಪಿಯ ಗುರಿ. ಇದು 'ಸಬ್ಕಾ ವಿಕಾಸ' (ಎಲ್ಲರ ಅಭಿವೃದ್ಧಿ) ಗೆ ಕಾರಣವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಂದಿನ ದಿನಗಳಲ್ಲಿ ದಕ್ಷಿಣ ಭಾರತದಲ್ಲೆಡೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಪ್ರತಿಪಕ್ಷಗಳ ಭಿನ್ನಾಭಿಪ್ರಾಯದಿಂದ ಜನರು ಅಸಮಾಧಾನಗೊಂಡಿದ್ದಾರೆ. ಸದ್ಯದಲ್ಲೇ ಕುಟುಂಬ ರಾಜಕಾರಣ, ಜಾತಿ ರಾಜಕಾರಣ ಮತ್ತು ಆಮಿಷ ರಾಜಕಾರಣವನ್ನು ಅಂತ್ಯಗೊಳಿಸಲಾಗುವುದು. ತೆಲಂಗಾಣ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ಕುಟುಂಬ ರಾಜಕಾರಣಕ್ಕೆ ಬಿಜೆಪಿ ತೆರೆ ಎಳೆಯುತ್ತದೆ ಎಂದು ಹೇಳಿದ್ದಾರೆ.
ಕಾರ್ಯಕಾರಿಣಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ವಿವಿಧ ವರ್ಗದ ಜನರನ್ನು ತಲುಪುವ ಮೂಲಕ ಸಮಾಜದಲ್ಲಿ ಪ್ರೀತಿ ಮತ್ತು ಸಮನ್ವಯತೆ ಹೆಚ್ಚಿಸುವ ಗುರಿ ಹೊಂದಿರುವ 'ಸ್ನೇಹ ಯಾತ್ರೆ' ಕೈಗೊಳ್ಳುವಂತೆ ಭಾನುವಾರ ಮೋದಿ ಕರೆ ನೀಡಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ:ತೆಲಂಗಾಣದಲ್ಲಿ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಬಂದೇ ಬರುತ್ತದೆ: ಪ್ರಧಾನಿ ಮೋದಿ