ಕೋಲ್ಕತ್ತಾ (ಪಶ್ಚಿಮಬಂಗಾಳ) :ಮುಂಬರುವ ಮುನ್ಸಿಪಲ್ ಚುನಾವಣೆ ಮೇಲೆ ಕಣ್ಣಿಟ್ಟಿರುವ ಭಾರತೀಯ ಜನತಾ ಪಾರ್ಟಿ, ಇದೀಗ ಪಕ್ಷದಲ್ಲಿ ಮಹತ್ವದ ಬದಲಾವಣೆ ಮಾಡಲು ಮುಂದಾಗಿದೆ. ಹೀಗಾಗಿ, ರಾಜ್ಯ ಬಿಜೆಪಿಯಲ್ಲಿ ಕೆಲ ಸ್ಥಾನ ಪುನರ್ ರಚನೆ ಮಾಡಲು ಇರಾದೆ ಇಟ್ಟುಕೊಂಡಿದೆ.
ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಮತ್ತೊಂದು ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಂತೆ ಅನೇಕ ಬಿಜೆಪಿ ಮುಖಂಡರು ಟಿಎಂಸಿ ಸೇರಿದ್ದಾರೆ. ಹೀಗಾಗಿ, ಅಲ್ಲಿನ ಪಕ್ಷದ ಪುನರ್ರಚನೆ ಮಾಡಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ.
ರಾಜ್ಯ ಸಮಿತಿ ರಚನೆ ಸೇರಿದಂತೆ ಎಲ್ಲ ವಿಭಾಗ ಇದೀಗ ಪುನರ್ರಚನೆಯಾಗಲಿದೆ. ರಾಜ್ಯ ಪ್ರಧಾನ ಕಾರ್ಯದರ್ಶಿಗಳ ಸ್ಥಾನಗಳಲ್ಲಿ ಹೊಸ ಮುಖಗಳಿಗೆ ಮಣೆ ಹಾಕುವ ಸಾಧ್ಯತೆ ಇದೆ. ಪ್ರಮುಖವಾಗಿ ದೇಬೋಜಿತ್ ಸರ್ಕಾರ್, ಡಾ. ಇಂದ್ರನಿಲ್ ಖಾ, ಲೋಕನಾಥ್ ಚಟ್ಟೋಪಾಧ್ಯಾಯ ಮತ್ತು ದೇಬ್ತಾನು ಭಟ್ಟಾಚಾರ್ಯರಂತಹ ಯುವ ಮುಖಗಳಿಗೆ ರಾಜ್ಯ ಸಮಿತಿಯಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, ಆರ್ಎಸ್ಎಸ್ಗೆ ಹತ್ತಿರ ಇರುವ ಮುಖಗಳಿಗೆ ರಾಜ್ಯ ಸಮಿತಿಯಲ್ಲಿ ಚಾನ್ಸ್ ಸಿಗುವ ಸಾಧ್ಯತೆ ಇದೆ.