ಕಾಸರಗೋಡು (ಕೇರಳ): ವಿಧಾನಸಭೆ ಚುನಾವಣೆಯಲ್ಲಿ ಇತಿಹಾಸ ಬರೆಯಲು ಬಿಜೆಪಿ ಪಣತೊಟ್ಟಿದ್ದು, ಲವ್ ಜಿಹಾದ್ ಹಾಗೂ ಶಬರಿಮಲೆ ವಿವಾದವನ್ನೇ ಪ್ರಚಾರದ ಅಸ್ತ್ರಗಳನ್ನಾಗಿ ಬಳಸಿಕೊಂಡಿದೆ.
ಬಿಜೆಪಿ ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ (ಎನ್‌ಡಿಎ) ಮತದಾರರನ್ನು ಸೆಳೆಯುವ ಪ್ರಯತ್ನದಲ್ಲಿ 'ಲವ್ ಜಿಹಾದ್' ವಿರುದ್ಧ ಕಾನೂನು ತರುವ ಭರವಸೆಯನ್ನು ನೀಡಿದೆ. ಶಬರಿಮಲೆ ದೇವಾಲಯ ಪ್ರವೇಶಿಸಲು ಮಹಿಳೆಯರಿಗೆ ಅನುಮತಿ ನೀಡುವ ಸುಪ್ರೀಂ ಕೋರ್ಟ್ ತೀರ್ಪನ್ನು ಬಿಜೆಪಿ ವಿರೋಧಿಸಿದೆ.
ಶಬರಿಮಲೆ ದೇವಾಲಯವಿರುವ ಕೊನ್ನಿ ಕ್ಷೇತ್ರ ಸೇರಿದಂತೆ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುತ್ತಿರುವ ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಅವರು ಈ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದು, ಜನರ ಮನಗೆಲ್ಲಲು ಯತ್ನಿಸುತ್ತಿದ್ದಾರೆ
ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶದ ವಿಚಾರದಲ್ಲಿ ಸಿಪಿಎಂ ಮುಖ್ಯಸ್ಥ, ಸಿಎಂ ಪಿಣರಾಯಿ ವಿಜಯನ್ ಅವರು ಪ್ರಚೋದನಕಾರಿ ನಿಲುವನ್ನು ತೆಗೆದುಕೊಳ್ಳುತ್ತಿದ್ದಾರೆ. 'ಎಡ ಸರ್ಕಾರ' ಅಧಿಕಾರದಲ್ಲಿರುವವರೆಗೂ ಶಬರಿಮಲೆ ಸ್ಥಳ ಸುರಕ್ಷಿತವಲ್ಲ. ಪಿಣರಾಯಿ ವಿಜಯನ್ ಶಬರಿಮಲೆಯ 'ವಿಧ್ವಂಸಕ' ಆಗುತ್ತಿದ್ದಾರೆ ಮತ್ತು ಅವರು ಈ ಪವಿತ್ರ ಸ್ಥಳವನ್ನು ಮತ್ತೊಮ್ಮೆ ಯುದ್ಧಭೂಮಿಯನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಸುರೇಂದ್ರನ್ ಆರೋಪಿಸಿದ್ದಾರೆ.