ಪಾಟ್ನಾ (ಬಿಹಾರ):ಕೇಂದ್ರದ ಮಾಜಿ ಸಚಿವ ರವಿಶಂಕರ್ ಪ್ರಸಾದ್ ಅವರು ಸೋಮವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಕ್ಸಮರ ನಡೆಸಿದರು. ರಾಹುಲ್ ವಿದೇಶ ಪ್ರವಾಸಕ್ಕೆ ಹೋದಾಗ ಭೇಟಿಯಾಗುವ 'ಅನಪೇಕ್ಷಿತ ಉದ್ಯಮಿಗಳ' ಬಗ್ಗೆ ಪ್ರಶ್ನಿಸಿದರು. ಪಾಟ್ನಾದಲ್ಲಿಂದು ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
ಪ್ರತಿ 4ರಿಂದ 5 ತಿಂಗಳಿಗೊಮ್ಮೆ ವಿದೇಶ ಪ್ರವಾಸ:''ರಾಹುಲ್ ಗಾಂಧಿ ವಿದೇಶ ಪ್ರವಾಸದಿಂದ ಹಿಂತಿರುಗಿದ ನಂತರ ಹೆಚ್ಚು ಆಕ್ರಮಣಕಾರಿಯಾಗುತ್ತಾರೆ'' ಎಂದು ಹೈಲೈಟ್ ಮಾಡಿದ ಅವರು, "ಅವರು ಪ್ರತಿ 4ರಿಂದ 5 ತಿಂಗಳಿಗೊಮ್ಮೆ ವಿದೇಶ ಪ್ರವಾಸಕ್ಕೆ ಹೋಗುತ್ತಾರೆ. ಅಲ್ಲಿ ಅವರು ಯಾರನ್ನು ಭೇಟಿಯಾಗುತ್ತಾರೆ ಎಂಬ ಪ್ರಶ್ನೆ ಮೂಡುತ್ತದೆ. ಅವರು ಭೇಟಿಯಾಗುವ ಈ ಅನಪೇಕ್ಷಿತ ಉದ್ಯಮಿಗಳು ಯಾರು? ಅವರು ಈ ಪ್ರವಾಸಗಳಿಂದ ಹಿಂದಿರುಗಿದ ನಂತರ, ಭಾರತದ ಮೇಲೆ, ಪ್ರಧಾನ ಮಂತ್ರಿಯ ಮೇಲೆ, ಭಾರತದ ಪ್ರಗತಿಯ ಬಗ್ಗೆ ತೀಕ್ಷ್ಣವಾಗಿ ದಾಳಿ ಮಾಡುವುದೇಕೆ? ಎಂದು ಕೇಳಿದರು.
''ಕಳೆದ 9 ವರ್ಷಗಳಲ್ಲಿ ರಾಹುಲ್ ಗಾಂಧಿ ದೇಶವನ್ನು ಹೊಗಳುವ ಒಂದೇ ಒಂದು ಪದವನ್ನೂ ಬಳಸಿಲ್ಲ'' ಎಂದ ಅವರು, "ಭಾರತ ಇಂದು ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ದೇಶ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ, ಜಾಗತಿಕ ಮಟ್ಟದಲ್ಲಿ ಭಾರತವು ತನ್ನ ಲಸಿಕೆ ಆವಿಷ್ಕಾರದೊಂದಿಗೆ ತನ್ನ ಛಾಪು ಮೂಡಿಸಿದಾಗ, ರಾಹುಲ್ ಅದನ್ನೂ ಕೂಡಾ ಸಹ ಪ್ರಶ್ನಿಸಿದರು. ಇದು ಭಾರತದ ಜಾಗತಿಕ ಇಮೇಜ್ ಹಾಳು ಮಾಡಲು ಬಯಸುವ ಭಾರತ ವಿರೋಧಿ ಉದ್ಯಮಿಯ ಇಚ್ಛೆಯಂತೆ ಕೆಲಸ ಮಾಡುತ್ತಿದ್ದಾರಾ ಎಂದು ಯೋಚಿಸುವಂತೆ ಮಾಡುತ್ತದೆ. ಅವರ ಅಜೆಂಡಾ ಏನು? ಎಂದರು.