ಗಾಂಧಿನಗರ(ಗುಜರಾತ್):ರಾಜ್ಯದಲ್ಲಿ2036ರ ಒಲಿಂಪಿಕ್ ಕ್ರೀಡಾಕೂಟ ಆಯೋಜನೆ, 20 ಲಕ್ಷ ಉದ್ಯೋಗ ಸೃಷ್ಟಿ, ಏಕರೀತಿಯ ನಾಗರಿಕ ಸಂಹಿತೆ ಜಾರಿ, ಕಾಲೇಜು ವಿದ್ಯಾರ್ಥಿನಿಯರಿಗೆ ಎಲೆಕ್ಟ್ರಿಕ್ ಸ್ಕೂಟರ್, ಶಾಲಾ ಮಕ್ಕಳಿಗೆ ಸೈಕಲ್ ಉಚಿತ..!
ಇವು ಬಿಜೆಪಿ ಪ್ರಣಾಳಿಕೆಯ ಪ್ರಮುಖ ಭರವಸೆಗಳು. ಮುಂದಿನ ತಿಂಗಳು ನಡೆಯುವ ಗುಜರಾತ್ ವಿಧಾನಸಭೆ ಚುನಾವಣೆ ಹಿನ್ನೆಲೆ ಕೇಸರಿ ಪಡೆ ಬಹುಪ್ರಮುಖವಾದ ಭರವಸೆಗಳನ್ನು ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಗಾಂಧಿನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಪ್ರಣಾಳಿಕೆಯನ್ನು ಶನಿವಾರ ಅನಾವರಣ ಮಾಡಿದರು.
ದೇಶ ವಿರೋಧಿ ಚಟುವಟಿಕೆ ನಿಯಂತ್ರಣ ಸೆಲ್:2036 ರಲ್ಲಿ ನಡೆಯುವ ವಿಶ್ವದ ಅತಿದೊಡ್ಡ ಕ್ರೀಡಾಕೂಟವಾದ ಒಲಂಪಿಕ್ ಅನ್ನು ಗುಜರಾತ್ನಲ್ಲಿ ಆಯೋಜಿಸಲಾಗುವುದು. ಭಯೋತ್ಪಾದಕ ಸಂಘಟನೆಗಳು ಮತ್ತು ಭಾರತ ವಿರೋಧಿ ಚಟುವಟಿಕೆಗಳು, ಸ್ಲೀಪರ್ ಸೆಲ್‌ಗಳನ್ನು ಗುರುತಿಸಿ ಅವುಗಳನ್ನು ಮಟ್ಟಹಾಕಲು "ದೇಶ ವಿರೋಧಿ ಚಟುವಟಿಕೆಗಳ ನಿಯಂತ್ರಣ ಸೆಲ್" ರಚನೆ ಮಾಡುವುದಾಗಿ ನಡ್ಡಾ ತಿಳಿಸಿದರು.
ವಕ್ಫ್ ಮಂಡಳಿಯ ಆಸ್ತಿಗಳು ಮತ್ತು ಹಣಕಾಸು ವ್ಯವಹಾರದ ಮೇಲೆ ನಿಗಾ, ಮದರಸಾ ಶಿಕ್ಷಣದ ಪಠ್ಯಕ್ರಮ ಮತ್ತು ಮದರಸಾಗಳ ಸಮೀಕ್ಷೆ ನಡೆಸಲು ಕಾರ್ಯಪಡೆ ರಚನೆ. ಧಾರ್ಮಿಕ ಸ್ವಾತಂತ್ರ್ಯದ ಕಾಯ್ದೆಯಡಿ ಬಲವಂತದ ಮತಾಂತರಗಳಿಗೆ ದಂಡದ ಜೊತೆಗೆ ಕಠಿಣ ಜೈಲು ಶಿಕ್ಷೆ ವಿಧಿಸುವುದನ್ನೂ ಪ್ರಣಾಳಿಕೆಯ ಭರವಸೆಯಾಗಿ ನೀಡಲಾಗಿದೆ.
ಪ್ರತಿಭಟನೆ, ರ್ಯಾಲಿ, ದೊಂಬಿ, ಗಲಭೆಯ ವೇಳೆ ಆಗುವ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳ ಹಾನಿಯ ನಷ್ಟವನ್ನು ಭರಿಸಲು ಗುಜರಾತ್ ವಸೂಲಾತಿ ಕಾಯ್ದೆಯನ್ನು ಜಾರಿಗೆ ತರಲಾಗುವುದು. ಪ್ರಮುಖವಾಗಿ ಏಕರೂಪ ನಾಗರಿಕ ಸಂಹಿತೆಯ ಅನುಷ್ಠಾನಕ್ಕಾಗಿ ಖಚಿತ ಭರವಸೆ ನೀಡಲಾಗಿದೆ.