ನವದೆಹಲಿ: ನೂತನ ರಾಷ್ಟ್ರಪತಿ ಆಯ್ಕೆಗೋಸ್ಕರ ಜುಲೈ 18ರಂದು ಮತದಾನ ನಡೆಯಲಿದ್ದು, ಜುಲೈ 21ರಂದು ಫಲಿತಾಂಶ ಬಹಿರಂಗಗೊಳ್ಳಲಿದೆ. ಈ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿಯಾಗಿರುವ ದ್ರೌಪದಿ ಮುರ್ಮು ಗೆಲುವು ಬಹುತೇಕ ಖಚಿತವಾಗಿದೆ. ಹೀಗಾಗಿ, ವಿಜಯೋತ್ಸವ ಆಚರಣೆ ಮಾಡಲು ಭಾರತೀಯ ಜನತಾ ಪಾರ್ಟಿ ಈಗಿನಿಂದಲೇ ಪ್ಲಾನ್ ಹಾಕಿಕೊಳ್ಳಲು ಶುರು ಮಾಡಿದೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ ಒಂದು ಲಕ್ಷಕ್ಕೂ ಅಧಿಕ ಬುಡಕಟ್ಟು ಗ್ರಾಮಗಳಲ್ಲಿ ದ್ರೌಪದಿ ಮುರ್ಮು ವಿಜಯೋತ್ಸವ ಆಚರಣೆ ಮಾಡಲು ಬಿಜೆಪಿ ನಿರ್ಧರಿಸಿದೆ. ಇದಕ್ಕೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತರಿಗೆ ಈಗಾಗಲೇ ಸೂಚನೆ ನೀಡಲಾಗಿದ್ದು, ರಾಷ್ಟ್ರಪತಿ ಚುನಾವಣೆಯ ಫಲಿತಾಂಶ ಬಹಿರಂಗಗೊಂಡ ಬಳಿಕ ಈ ಸಂಭ್ರಮಾಚರಣೆ ಮಾಡಲು ಸೂಚಿಸಲಾಗಿದೆ.
ಬಿಜೆಪಿ ಹೈಕಮಾಂಡ್ ಎಲ್ಲ ರಾಜ್ಯಗಳ ಬಿಜೆಪಿ ಅಧ್ಯಕ್ಷರಿಗೆ ಸೂಚನೆ ನೀಡಿದ್ದು, ಈ ಗೆಲುವನ್ನ ದೇಶದ ಪ್ರತಿವೊಂದು ಮೂಲೆಗಳಲ್ಲೂ ಆಚರಿಸಲು ನಿರ್ಧರಿಸಿದೆ. ಮುಖ್ಯವಾಗಿ ಬುಡಕಟ್ಟು ಗ್ರಾಮಗಳಲ್ಲಿ ಹೆಚ್ಚಿನ ಆದ್ಯತೆ ನೀಡಲು ಸೂಚಿಸಿದೆ.
ಇದನ್ನೂ ಓದಿರಿ:ಬ್ರಿಟನ್ ಪ್ರಧಾನಿ ಹುದ್ದೆಗೆ ಮತ್ತಷ್ಟು ಸನಿಹ.. ಎರಡನೇ ಸುತ್ತಿನಲ್ಲೂ ಸುನಕ್ ಭಾರೀ ಮುನ್ನಡೆ
ದ್ರೌಪದಿ ಮುರ್ಮು ರಾಷ್ಟ್ರಪತಿಯಾಗಿ ಆಯ್ಕೆಯಾದರೆ, ದೇಶದ ಇತಿಹಾಸದಲ್ಲಿ ಮೊದಲ ಬುಡಕಟ್ಟು ಮಹಿಳೆ ದೇಶದ ಪ್ರಥಮ ಪ್ರಜೆಯಾಗಲಿದ್ದಾರೆ. ದ್ರೌಪದಿ ಮುರ್ಮು ಈಗಾಗಲೇ ಜಾರ್ಖಂಡ್ ಮಾಜಿ ರಾಜ್ಯಪಾಲೆಯಾಗಿ ಸೇವೆ ಸಲ್ಲಿಸಿದ್ದು, ಒಡಿಶಾ ಸಚಿವೆ ಸಹ ಆಗಿದ್ದರು. ಇದೀಗ ರಾಷ್ಟ್ರಪತಿ ಹುದ್ದೆಗೆ ಸ್ಪರ್ಧೆ ಮಾಡಿದ್ದಾರೆ. ಹಾಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅವಧಿ ಜುಲೈ 24ರಂದು ಮುಕ್ತಾಯವಾಗಲಿದೆ. ಜುಲೈ 18ರಂದು ಹೊಸ ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಜುಲೈ 21ರಂದು ಫಲಿತಾಂಶ ಘೋಷಣೆಯಾಗಲಿದೆ.
ದ್ರೌಪದಿ ಮುರ್ಮು ಅವರು ಕೌನ್ಸಿಲರ್ ಆಗಿ ತಮ್ಮ ರಾಜಕೀಯ ವೃತ್ತಿಜೀವನ ಆರಂಭಿಸಿದರು. ನಂತರ ರಾಯ್ರಂಗಪುರ ರಾಷ್ಟ್ರೀಯ ಸಲಹಾ ಮಂಡಳಿ ಅಥವಾ NAC ನ ಉಪಾಧ್ಯಕ್ಷರಾದರು. 2013ರಲ್ಲಿ ಅವರು ಬಿಜೆಪಿ ಪಕ್ಷದ ಎಸ್‌ಟಿ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆಯ ಸ್ಥಾನಕ್ಕೆ ಏರಿದ್ದರು.
ಭುವನೇಶ್ವರದ ರಮಾ ದೇವಿ ಮಹಿಳಾ ಕಾಲೇಜಿನಲ್ಲಿ ಕಲಾ ಪದವಿ ಪಡೆದ ಅವರು ರಾಜಕೀಯ ಮತ್ತು ಸಮಾಜ ಸೇವೆಯಲ್ಲಿ ಸುಮಾರು ಎರಡು ದಶಕಗಳನ್ನು ಕಳೆದಿದ್ದಾರೆ. ದ್ರೌಪದಿ ಮುರ್ಮು ಅವರಿಗೆ ಎದುರಾಳಿಯಾಗಿ ಪ್ರತಿಪಕ್ಷಗಳಿಂದ ಯಶವಂತ್ ಸಿನ್ಹಾ ಕಣದಲ್ಲಿದ್ದಾರೆ.