ನವದೆಹಲಿ:ಪಾರ್ಲಿಮೆಂಟ್ನ ಚಳಿಗಾಲದ ಅಧಿವೇಶನದಲ್ಲಿ ಸಂಸದರ ಹಾಜರಾತಿ ಕಡಿಮೆಯಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ಅಧಿವೇಶನಕ್ಕೆ ಹಾಜರಾಗಲು ಎಲ್ಲಾ ಸಂಸದರು ಆದ್ಯತೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ಇದೇ ವೇಳೆ, ನೀವೇ ಬದಲಾಗಿ, ಇಲ್ಲವೇ ಬದಲಾವಣೆಗೆ ಸಿದ್ಧರಾಗಿ ಎಂದು ಖಡಕ್ ಆಗಿ ಎಚ್ಚರಿಕೆ ಕೊಟ್ಟಿದ್ದಾರೆ.
ನವದೆಹಲಿಯ ಡಾ.ಅಂಬೇಡ್ಕರ್ ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ ಮಂಗಳವಾರ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದೀಯ ಪಕ್ಷದ ಸಭೆಯ ಅಧ್ಯಕ್ಷತೆ ವಹಿಸಿಕೊಂಡಿದ್ದ ಮೋದಿ, ಅಧಿವೇಶನಕ್ಕೆ ಹಾಜರಾಗದ ಸಂಸದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಮೂಲಗಳ ಪ್ರಕಾರ, ತಮ್ಮನ್ನು ತಾವು ಪರಿವರ್ತಿಸಿಕೊಳ್ಳದ ಹೊರತು ಬದಲಾವಣೆಗಳು ಆಗುವುದಿಲ್ಲ ಎಂದು ಪ್ರಧಾನಿ ಸಂಸದೀಯ ಪಕ್ಷದ ಸಭೆಯಲ್ಲಿ ಎಚ್ಚರಿಕೆ ನೀಡಿದ್ದಾರೆ. ಸಂಸತ್ತಿನಲ್ಲಿ ಪ್ರತಿನಿಧಿಸುವ ಸಲುವಾಗಿಯೇ ಜನರು ತಮ್ಮನ್ನು ಆಯ್ಕೆ ಮಾಡಿರುವುದರಿಂದ, ಅಧಿವೇಶನಕ್ಕೆ ಹಾಜರಾಗುವುದು ಸಂಸದರ ಕರ್ತವ್ಯ ಎಂದು ಒತ್ತಿ ಹೇಳಿದ್ದಾರೆ. ಇದಕ್ಕೂ ಮೊದಲು ಮುಂಗಾರು ಅಧಿವೇಶನದಲ್ಲಿ ಹಾಗೂ ಬಜೆಟ್ ಅಧಿವೇಶನದಲ್ಲಿಯೂ ಸಂಸದರಿಗೆ ಮೋದಿ ಎಚ್ಚರಿಕೆ ನೀಡಿದ್ದರು.
ಅಂದಹಾಗೆ, ಈ ಮೊದಲು ಸಂಸದೀಯ ಸಭೆ ನಡೆಯುತ್ತಿದ್ದ ಕಟ್ಟಡದಲ್ಲಿ ಕಾಮಗಾರಿ ನಡೆಯುತ್ತಿರುವ ಕಾರಣದಿಂದ ಇದೇ ಮೊದಲ ಬಾರಿಗೆ ಸಂಸತ್ನಿಂದ ಹೊರಗೆ, ಡಾ.ಅಂಬೇಡ್ಕರ್ ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ ಮಹತ್ವದ ಸಭೆ ನಡೆಸಲಾಗಿದೆ.