ನವದೆಹಲಿ: ದೆಹಲಿಯಲ್ಲಿ ಬಿಜೆಪಿಯ ಆಪರೇಷನ್ ಕಮಲ ವಿಫಲವಾಗಿದೆ ಎಂದು ಆಮ್ ಆದ್ಮಿ ಪಕ್ಷ ಗುರುವಾರ ಹೇಳಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದಲ್ಲಿ ನಡೆದ ಸಭೆಯ ನಂತರ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಎಎಪಿ ವಕ್ತಾರ ಸೌರಭ್ ಭಾರದ್ವಾಜ್, ಎಎಎಪಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ದೆಹಲಿ ಸರ್ಕಾರ ಸಂಪೂರ್ಣವಾಗಿ ಸ್ಥಿರವಾಗಿದೆ ಎಂದು ಅವರು ಹೇಳಿದ್ದಾರೆ.
ಬಿಜೆಪಿಯ ನಾಯಕರು ಹೆಣೆದ ಬಲೆಯಲ್ಲಿ ಆಪ್ ಪಕ್ಷದ ನಾಯಕರು ಸಿಲುಕುವುದಿಲ್ಲ ಎಂದು ಮೊದಲೇ ಗೊತ್ತಿತ್ತು. ಅಲ್ಲದೇ ಅವರ ಯಾವುದೇ ಆಸೆಗಳಿಗೆ ಒಳಗಾಗುವುದಿಲ್ಲ ಎಂಬ ವಿಶ್ವಾಸವೂ ಇತ್ತು. ಅದರಂತೆ ನಮ್ಮ ಯಾವುದೇ ಶಾಸಕರು ಅವರ ಆಸೆಗಳಿಗೆ ಬಲಿಯಾಗಿಲ್ಲ. ಆಪರೇಷನ್ ಕಮಲ ವಿಫಲವಾಗಿದೆ. ದೆಹಲಿ ಸರ್ಕಾರ ಸುಭದ್ರವಾಗಿದೆ. ಯಾರೂ ಧೈರ್ಯ ಕಳೆದುಕೊಳ್ಳುವುದು ಬೇಕಿಲ್ಲ ಎಂದರು.
ಆದರೆ, ಬಿಜೆಪಿಯು ನಮ್ಮ ಶಾಸಕರನ್ನು ಸೆಳೆಯಲು ಆಪರೇಷನ್ ಕಮಲ ನಡೆಸಿದ್ದು ನಿಜ. ಎಎಪಿ ತೊರೆಯಲು ಬಿಜೆಪಿ ನಾಯಕರು ತಮ್ಮನ್ನು ಸಂಪರ್ಕಿಸಿದ್ದಾರೆ ಎಂದು 12 ಶಾಸಕರು ಇಂದು ನಡೆದ ಸಭೆಯಲ್ಲಿ ಹೇಳಿದ್ದಾರೆ. ಪ್ರತಿ ಶಾಸಕರಿಗೆ 20 ಕೋಟಿಯಂತೆ 40 ಶಾಸಕರನ್ನು ಕರೆತರಲು ಬರೋಬ್ಬರಿ 800 ಕೋಟಿ ಮೊತ್ತದ ಆಫರ್ ನೀಡಿದ್ದು ನಿಜವೆಂದು ಭಾರದ್ವಾಜ್ ಹೇಳಿದ್ದಾರೆ. ಆದರೆ, ಈ 800 ಕೋಟಿ ರೂ. ಮೌಲ್ಯದ ಕಪ್ಪುಹಣ ಎಲ್ಲಿದೆ? ಪತ್ತೆ ಮಾಡಲು ಇಡಿ ಮತ್ತು ಸಿಬಿಐ ಏಕೆ ದಾಳಿ ನಡೆಸುವುದಿಲ್ಲ ಎಂದು ಅವರು ಪ್ರಶ್ನಿಸಿದರು.
ಈ ಕಪ್ಪು ಹಣದ ವಿರುದ್ಧ ಪ್ರತಿಭಟಿಸಲು, ನಾವು ಮಹಾತ್ಮಾ ಗಾಂಧಿ ಸಮಾಧಿ ಸ್ಥಳಕ್ಕೆ ಹೋಗಲು ನಿರ್ಧರಿಸಿದ್ದೇವೆ. ಈ ಹಿಂದೆ ಗಾಂಧಿಜಿ ಬ್ರಿಟಿಷರಿಂದ ನಮ್ಮನ್ನು ರಕ್ಷಿಸಿ ಮಹಾತ್ಮರಾದರು. ಈಗ ಅವರೇ ನಮ್ಮನ್ನು ಇದರಿಂದ ರಕ್ಷಿಸುತ್ತಾರೆ. ಇಂದು ನಡೆದ ಸಭೆಯಲ್ಲಿ ಒಟ್ಟು 62 ಶಾಸಕರ ಪೈಕಿ 53 ಶಾಸಕರು ಭಾಗವಹಿಸಿದ್ದರು. ಉಳಿದವರು ಬೇರೆ ಬೇರೆ ಕಾರಣಗಳಿಂದ ಫೋನ್‌ನಲ್ಲಿ ಸಂಪರ್ಕದಲ್ಲಿದ್ದರು ಎಂದು ವಕ್ತಾರರು ಮಾಹಿತಿ ನೀಡಿದರು. ಸದ್ಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಆಪ್ ಪಕ್ಷದ ಮುಖಂಡರು ಮಹಾತ್ಮಾ ಗಾಂಧಿ ಸಮಾಧಿ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.
ಇದನ್ನು ಓದಿ:ಕಿರುಕುಳಕ್ಕೂ ಒಂದು ಮಿತಿ ಇದೆ, ಎಲ್ಲದಕ್ಕೂ ನಾನು ರೆಡಿ ಇದ್ದೇನೆ.. ಡಿಕೆಶಿ