ನವದೆಹಲಿ:ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಬಿಜೆಪಿ ಸೇರಲು ಆಫರ್ ನೀಡಲಾಗಿತ್ತು ಎಂಬ ಆರೋಪದ ನಡುವೆ, ಇದೀಗ ಪಕ್ಷದ ರಾಷ್ಟ್ರೀಯ ವಕ್ತಾರ ಹಾಗೂ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ಎಎಪಿ ಶಾಸಕರು ಬಿಜೆಪಿ ಸೇರಿಕೊಳ್ಳಲು 20 ಕೋಟಿ ರೂಪಾಯಿ ಆಫರ್ ನೀಡಲಾಗಿದ್ದು, ಇತರೆ ಶಾಸಕರನ್ನು ಕರೆತಂದರೆ 25 ಕೋಟಿ ರೂಪಾಯಿ ನೀಡುವ ಆಮಿಷ ಒಡ್ಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಎಎಪಿ ಶಾಸಕರು ಪ್ರಸ್ತಾಪ ಸ್ವೀಕರಿಸದಿದ್ದರೆ ಅಥವಾ ಬಿಜೆಪಿಗೆ ಸೇರ್ಪಡೆಯಾಗದಿದ್ದರೆ ಸುಳ್ಳು ಪ್ರಕರಣ ಎದುರಿಸಬೇಕಾಗುತ್ತದೆ ಎಂದು ಬಿಜೆಪಿ ಎಚ್ಚರಿಸಿದ್ದು, ಮನೀಶ್ ಸಿಸೋಡಿಯಾ ಎದುರಿಸುತ್ತಿರುವ ರೀತಿಯಲ್ಲೇ ಸಿಬಿಐ, ಇಡಿ ವಿಚಾರಣೆ ಎದುರಿಸಬೇಕಾಗುತ್ತದೆ ಎಂದರು. ಮಾಧ್ಯಮಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ನಮ್ಮ ಶಾಸಕರಾದ ಅಜಯ್ ದತ್, ಸಂಜೀವ್ ಝಾ, ಸೋಮನಾಥ್ ಭಾರತಿ ಮತ್ತು ಕುಲದೀಪ್ ಅವರನ್ನು ಬಿಜೆಪಿ ಸಂಪರ್ಕಿಸಿದ್ದಾಗಿ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸಂಜಯ್ ಸಿಂಗ್, ಎಎಪಿ ಶಾಸಕರನ್ನು ಬಿಜೆಪಿ ಸೇರಿಸಲು ಮತ್ತು ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಸರ್ಕಾರ ಕೆಡವಲು ಪ್ರಯತ್ನಿಸಲಾಗ್ತಿದೆ. ಬಿಜೆಪಿಯ ಈ ತಂತ್ರಗಾರಿಕೆ ಮಹಾರಾಷ್ಟ್ರದಲ್ಲಿ ಯಶಸ್ವಿಯಾದ್ದು ದೆಹಲಿಯಲ್ಲಿ ವಿಫಲವಾಗಿದೆ. ಹೀಗಾಗಿ, ಶಾಸಕರ ಮೇಲೆ ಆಮಿಷ ಒಡ್ಡಲಾಗ್ತಿದೆ ಎಂದು ಆರೋಪಿಸಿದರು. ದೇಶದಲ್ಲಿ ಬೆಲೆ ಏರಿಕೆ, ನಿರುದ್ಯೋಗದಂತಹ ಪ್ರಕರಣ ಇತ್ಯರ್ಥದ ಬದಲಿಗೆ ಮೋದಿ ಈ ರೀತಿಯ ಕೆಲಸಕ್ಕೆ ಕೈಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.