ಲಖನೌ (ಉತ್ತರ ಪ್ರದೇಶ):2024ರ ಲೋಕಸಭೆ ಚುನಾವಣೆಗೆ ಆಡಳಿತಾರೂಢ ಬಿಜೆಪಿ ಸಜ್ಜಾಗುತ್ತಿದೆ. ದೇಶದಲ್ಲಿ ಅತಿ ಹೆಚ್ಚು ಸಂಸತ್ ಸ್ಥಾನಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ತನ್ನ ಹಿಡಿತ ಮುಂದುವರೆಸುವ ಕಸರತ್ತನ್ನು ಕೇಸರಿ ಪಡೆ ಈಗಿನಿಂದಲೇ ಶುರು ಮಾಡಿದೆ. ಕಳೆದ ಚುನಾವಣೆಯಲ್ಲಿ ಸೋತ ಕ್ಷೇತ್ರಗಳ ಮೇಲೆ ಆಡಳಿತಾರೂಢ ಪಕ್ಷ ತನ್ನ ದೃಷ್ಟಿ ನೆಟ್ಟಿದ್ದು, ಆಯಾ ಕ್ಷೇತ್ರಗಳಲ್ಲಿ ಭರ್ಜರಿ ಪ್ರಚಾರ ನಡೆಸಲು ಸಿದ್ಧತೆ ನಡೆಸುತ್ತಿದೆ.
ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ 2019ರ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ 80 ಲೋಕಸಭೆ ಕ್ಷೇತ್ರಗಳ ಪೈಕಿ ಒಟ್ಟು 64 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಆದಾಗ್ಯೂ, 16 ಕ್ಷೇತ್ರಗಳಲ್ಲಿ ಪರಾಭವಗೊಂಡಿತ್ತು. ಆದರೆ, ನಂತರದ ಉಪ ಚುನಾವಣೆಗಳಲ್ಲಿ ಕೇಸರಿ ಪಕ್ಷವು ಅಜಂಗಢ ಮತ್ತು ರಾಂಪುರ ಕ್ಷೇತ್ರಗಳನ್ನು ಗೆದ್ದುಕೊಂಡಿತು. ಇದರಿಂದ ಸದ್ಯ 66 ಕ್ಷೇತ್ರಗಳಲ್ಲಿ ಬಿಜೆಪಿ ಸಂಸದರಿದ್ದಾರೆ. ಮತ್ತೊಂದೆಡೆ, 14 ಕ್ಷೇತ್ರಗಳಲ್ಲಿ ಬಿಜೆಪಿಯೇತರ ಲೋಕಸಭಾ ಸದಸ್ಯರಿದ್ದಾರೆ. ಇದರಲ್ಲಿ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಪ್ರಮುಖರು. ಬಿಜೆಪಿ ಹೊರತಾದ ಸಂಸದರ ರಿಪೋರ್ಟ್ ಕಾರ್ಡ್ ಸಾರ್ವಜನಿಕರ ಮುಂದಿಡುವ ತಂತ್ರವನ್ನು ಕಮಲ ಪಾಳಯ ರೂಪಿಸುತ್ತಿದೆ.
ರಾಯ್ ಬರೇಲಿಯಿಂದಲೇ ಬಿಜೆಪಿ ಅಭಿಯಾನ: ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶ ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕಾದರೆ ಸಾಧ್ಯವಾದಷ್ಟು ಸದಸ್ಯರನ್ನು ಆಯ್ಕೆ ಮಾಡಿಕೊಳ್ಳುವುದು ಯಾವುದೇ ರಾಜಕೀಯ ಪಕ್ಷಕ್ಕೆ ಅತ್ಯಗತ್ಯ ಹಾಗೂ ಅನಿರ್ವಾಯವೂ ಹೌದು. ಆದರೆ, ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸೋನಿಯಾ ಗಾಂಧಿ ಮಾತ್ರ ಗೆದ್ದಿದ್ದಾರೆ. ಲೋಕಸಭೆಯಲ್ಲಿ ರಾಯ್ ಬರೇಲಿ ಕ್ಷೇತ್ರವನ್ನು ಇವರು ಪ್ರತಿನಿಧಿಸುತ್ತಿದ್ದಾರೆ. ಅಮೇಠಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪಕ್ಷದ ನಾಯಕ ರಾಹುಲ್ ಗಾಂಧಿ, ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ಸೋಲು ಕಂಡಿದ್ದರು. ಹೀಗಾಗಿ 80 ಕ್ಷೇತ್ರಗಳ ಹೊಂದಿರುವ ಯುಪಿಯನ್ನು ಕಾಂಗ್ರೆಸ್ನಿಂದ ಸೋನಿಯಾ ಮಾತ್ರ ಪ್ರತಿನಿಧಿಸುವಂತಾಗಿದೆ.