ಪುಣೆ (ಮಹಾರಾಷ್ಟ್ರ): ಮಹಾರಾಷ್ಟ್ರದ ಪುಣೆಯ ಬಿಜೆಪಿ ಸಂಸದ ಗಿರೀಶ್ ಬಾಪಟ್ ಇಂದು ನಿಧನರಾಗಿದ್ದಾರೆ. 74 ವರ್ಷ ವಯಸ್ಸಿನ ಅವರು ಕಳೆದ ಕೆಲವು ತಿಂಗಳಿಂದ ಉಸಿರಾಟದ ಕಾಯಿಲೆಯಿಂದ ಬಳಲುತ್ತಿದ್ದರು. ಇಂದು ಪುಣೆಯ ದೀನಾನಾಥ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಗಿರೀಶ್ ಬಾಪಟ್ ಅವರ ನಿಧನಕ್ಕೆ ಪ್ರಧಾನಿ ಮೋದಿ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ಬಿಜೆಪಿ ಸಂಸದ ಗಿರೀಶ್ ಬಾಪಟ್ ಅವರನ್ನು ಕಳೆದ ಎರಡು ದಿನಗಳಿಂದ ದೀನಾನಾಥ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ಡಯಾಲಿಸಿಸ್‌ಗೂ ಒಳಗಾಗಿದ್ದರು. ಇತ್ತೀಚಿಗೆ ನಡೆದ ಕಸ್ಬಾ ಉಪಚುನಾವಣೆಯಲ್ಲಿ ಆಕ್ಸಿಜನ್ ಅಳವಡಿಸಿಕೊಂಡು ಪ್ರಚಾರ ಮಾಡಿದ್ದರು. ಅಲ್ಲದೇ, ಆಕ್ಸಿಜನ್ನೊಂದಿಗೆ ಬಂದು ಮತದಾನ ಮಾಡಿದ್ದರು. ಎರಡು ದಿನಗಳ ಹಿಂದೆ ಮತ್ತೆ ಬಾಪಟ್ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿತ್ತು. ಗಿರೀಶ್ ಅವರು ಪತ್ನಿ, ಮಗ, ಸೊಸೆ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.
ಮಹಾರಾಷ್ಟ್ರ ಬಿಜೆಪಿಗೆ ಇಂದು ತುಂಬಲಾರದ ನಷ್ಟ ಮತ್ತು ದುರದೃಷ್ಟಕರ ದಿನವಾಗಿದೆ. ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಹಾಗೂ ಪುಣೆ ಸಂಸದ ಗಿರೀಶ್ ಬಾಪಟ್ ಅವರು ನಮ್ಮನ್ನು ಅಗಲಿದ್ದಾರೆ. ಕಳೆದ ಒಂದೂವರೆ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಸಂಜೆ 7 ಗಂಟೆಗೆ ಪುಣೆಯ ವೈಕುಂಠ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲದೇ, ರಾಜ್ಯದ ವಿವಿಧ ಪಕ್ಷಗಳ ಮುಖಂಡರು ಕೂಡ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿ ಪುಣೆ ನಗರಾಧ್ಯಕ್ಷ ಜಗದೀಶ್ ಮುಲಿಕ್ ಮಾಹಿತಿ ನೀಡಿದ್ದಾರೆ.