ನವದೆಹಲಿ: ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ ಹೊರ ಬೀಳುತ್ತಿದ್ದಂತೆ ರಾಜ್ಯದಲ್ಲಿ ಹೇರಲಾಗಿರುವ ಮದ್ಯ ನಿಷೇಧ ಕಾಯ್ದೆ ತಿದ್ದುಪಡಿ ಕುರಿತು ಒತ್ತಡಗಳು ಬರುತ್ತಿವೆ. ಜಾರ್ಖಂಡ್ನ ಬಿಜೆಪಿ ಸಂಸದರೊಬ್ಬರು ಮದ್ಯ ನಿಷೇಧ ಕಾಯ್ದೆಯನ್ನು ತಿದ್ದುಪಡಿ ಮಾಡುವಂತೆ ಜೆಡಿಯು ನಾಯಕ ನಿತೀಶ್ ಕುಮಾರ್ಗೆ ಮನವಿ ಮಾಡಿಕೊಂಡಿದ್ದಾರೆ.
ಮದ್ಯ ನಿಷೇಧ ಕಾನೂನು ರಾಜ್ಯದ ಬೊಕ್ಕಸಕ್ಕೆ ನಷ್ಟ ತರುತ್ತಿದೆ. ಅಲ್ಲದೇ ಈ ಶಿಷ್ಟಾಚಾರದ ಕಾನೂನು ಪರೋಕ್ಷವಾಗಿ ಭ್ರಷ್ಟಾಚಾರ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಹಾಗಾಗಿ ರಾಜ್ಯದಲ್ಲಿ ಹೇರಲಾಗಿರುವ ಮದ್ಯ ನಿಷೇಧ ಕಾಯ್ದೆ ತಿದ್ದುಪಡಿ ಮಾಡಿದರೆ ತಳ ಹಿಡಿಯುತ್ತಿರುವ ಆರ್ಥಿಕ ಹಿಂಜರಿತವನ್ನು ಮೇಲಕ್ಕೆತ್ತಬಹುದು. ಹಾಗಾಗಿ ಈ ನಿರ್ಧಾರ ಕೈಗೊಳ್ಳುವಂತೆ ಜಾರ್ಖಂಡ್ನ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಮನವಿ ಮಾಡಿದ್ದಾರೆ.
ನಿತೀಶ್ ಕುಮಾರ್ ರಾಜ್ಯದಲ್ಲಿ ತರಲಾಗಿರುವ ಮದ್ಯ ನಿಷೇಧ ನೀತಿಯಲ್ಲಿ ಕೆಲವು ತಿದ್ದುಪಡಿಗಳನ್ನು ತರಬೇಕು. ಮದ್ಯ ನಿಷೇಧ ಹೇರಿದ್ದರೂ ಬೇರೆ ರಾಜ್ಯದಿಂದ ಕಳ್ಳ ಮಾಲು ತಂದು ಜನ ಕುಡಿಯುತ್ತಿದ್ದಾರೆ. ಇದು ಹೀಗೆಯೇ ಮುಂದುವರೆದರೆ ಹೋಟೆಲ್ ಉದ್ಯಮದ ಮೇಲೆ ಪರಿಣಾಮ ಬೀರಬಹುದು. ಪೊಲೀಸ್ ಮತ್ತು ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಬಹುದು ಎಂದು ದುಬೆ ಹೇಳಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ದೊರೆತು ಎರಡು ದಿನಗಳ ನಂತರ ದುಬೆ ಜೆಡಿಯು ನಾಯಕ ನಿತೀಶ್ ಕುಮಾರ್ಗೆ ಟ್ವೀಟ್ ಮಾಡಿ ಈ ಸಲಹೆ ನೀಡಿದ್ದಾರೆ.
2015ರಲ್ಲಿ ಮುಖ್ಯಮಂತ್ರಿ ಪಟ್ಟಕ್ಕೆ ಏರುತ್ತಿದ್ದಂತೆ ನಿತೀಶ್ ಕುಮಾರ್ ರಾಜ್ಯದಲ್ಲಿ ಮದ್ಯ ಮಾರಾಟ ಮತ್ತು ಬಳಕೆಗೆ ನಿಷೇಧ ಹೇರಿದ್ದು, ಅವರ ಆಡಳಿತಾವಧಿಯಲ್ಲಿಯಾದ ಸುಧಾರಣೆಯಲ್ಲಿ ಇದು ಕೂಡ ಒಂದು.