ಮುಂಬೈ: ಕೋವಿಡ್ ನಿಯಂತ್ರಿಸಲು ಜನವರಿ 16 ರಿಂದ ಲಸಿಕೆ ಅಭಿಯಾನ ನಡೆಸಲಾಗುತ್ತಿದೆ. ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರ ಉಚಿತ ನೀಡಲಾಗಿರುವ ಲಸಿಕೆಯನ್ನು ಮುಂಬೈ ಮಹಾನಗರ ಪಾಲಿಕೆ ಆಡಳಿತವು ಖಾಸಗಿ ಆಸ್ಪತ್ರೆಗಳಿಗೆ ನೀಡಿದೆ. ಮಹಾನಗರ ಪಾಲಿಕೆಯ ಕಾರ್ಯದಿಂದಾಗಿ ಮುಂಬೈನ ನಾಗರಿಕರು ಉಚಿತ ಲಸಿಕೆಯಿಂದ ವಂಚಿತರಾಗಿದ್ದಾರೆ ಎಂದು ಬಿಜೆಪಿ ಸಂಸದ ಮನೋಜ್ ಕೋಟಕ್ ಗಂಭೀರ ಆರೋಪ ಮಾಡಿದ್ದಾರೆ.
ಮುಂಬೈ ನಗರವೂ ಕೋವಿಡ್ನಿಂದ ತತ್ತರಿಸಿ ಹೋಗಿದೆ. ಕಳೆದ ವರ್ಷ ಹರಡಲು ಪ್ರಾರಂಭವಾದ ಸೋಂಕು ಕೊಂಚ ಕಡಿಮೆಯಾಗಿತ್ತಾದರೂ, ಫೆಬ್ರವರಿಯಿಂದ ಮತ್ತೆ ಹೆಚ್ಚಾಗಿದೆ. ಸೋಂಕು ನಿಯಂತ್ರಿಸಲು ನಗರದಲ್ಲಿ ಜನವರಿ 16 ರಿಂದಲೇ ಲಸಿಕೆ ಅಭಿಯಾನ ಪ್ರಾರಂಭಿಸಲಾಗಿದೆ. ಆರಂಭದಲ್ಲಿ ಪಾಲಿಕೆ ಕಚೇರಿಗಳು ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಲಸಿಕೆ ವಿತರಿಸಲು ಅವಕಾಶ ನೀಡಲಾಗಿತ್ತು. ಬಳಿಕ, ಸರ್ಕಾರಿ ಕೇಂದ್ರಗಳ ಒತ್ತಡ ಕಡಿಮೆ ಮಾಡಲು ಮತ್ತು ಲಸಿಕೆ ಅಭಿಯಾನವನ್ನು ವೇಗಗೊಳಿಸಲು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲು ಅವಕಾಶ ನೀಡಲಾಯಿತು. ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಗೆ 250 ರೂ. ಬೆಲೆ ನಿಗದಿ ಮಾಡಿ ಕೇಂದ್ರ ಸರ್ಕಾರ ಆದೇಶಿಸಿತ್ತು. ಆದರೆ, ಮುಂಬೈ ಮಹಾನಗರ ಪಾಲಿಕೆಯೂ ಕೇಂದ್ರ ಸರ್ಕಾರ ಕೊಟ್ಟ ಉಚಿತ ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳಿಗೆ ಮಾರಿದೆ. ಪ್ರತಿ ಡೋಸ್ ಲಸಿಕೆ ಮೇಲೆ 150 ರೂ. ಪಡೆದಿದೆ ಎಂದು ಮನೋಜ್ ಕೋಟಕ್ ಆರೋಪಿಸಿದ್ದಾರೆ.