ರಾಂಚಿ(ಜಾರ್ಖಂಡ್) :ಹೊಸವಿಧಾನಸಭೆಯಲ್ಲಿ ನಮಾಜ್ ಮಾಡಲು ಪ್ರತ್ಯೇಕ ಕೊಠಡಿಯೊಂದನ್ನು ನೀಡಿ ಜಾರ್ಖಂಡ್ ವಿಧಾನಸಭಾ ಸಚಿವಾಲಯ ಆದೇಶ ಹೊರಡಿಸಿದೆ. ಆದರೆ, ಅದೇ ಆದೇಶ ಸಾಕಷ್ಟು ವಿವಾದಗಳಿಗೆ ಕಾರಣವಾಗಿದೆ.
ಬಿಜೆಪಿ ಶಾಸಕರು ಸಿಎಂ ಹೇಮಂತ್ ಸೊರೆನ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಟ್ವೀಟ್ ಮೂಲಕ ಸರ್ಕಾರದ ನಿರ್ಧಾರದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಿಜೆಪಿ ನಾಯಕ ಬಾಬುಲಾಲ್ ಮರಾಂಡಿ ಟ್ವೀಟ್ ಮಾಡಿ, ಪ್ರಜಾಪ್ರಭುತ್ವದ ದೇವಾಲಯವಾದ ವಿಧಾನಸಭೆ ಪ್ರಜಾಪ್ರಭುತ್ವದ ದೇವಾಲಯವಾಗಿ ಉಳಿಯಬೇಕು ಎಂದಿದ್ದಾರೆ.
ಮತ್ತೊಬ್ಬ ಬಿಜೆಪಿ ಶಾಸಕ ಮತ್ತು ಮಾಜಿ ವಿಧಾನಸಭಾ ಸ್ಪೀಕರ್ ಸಿ ಪಿ ಸಿಂಗ್ ಪ್ರಾರ್ಥನಾ ಕೊಠಡಿ ನೀಡಿರುವುದಕ್ಕೆ ನನ್ನಿಂದ ಯಾವುದೇ ಆಕ್ಷೇಪವಿಲ್ಲ. ಆದರೆ, ಜಾರ್ಖಂಡ್ ವಿಧಾನಸಭಾ ಸಂಕೀರ್ಣದಲ್ಲಿ ದೇವಸ್ಥಾನವೊಂದನ್ನು ನಿರ್ಮಿಸಬೇಕು ಎಂದು ಟ್ವೀಟ್ ಮಾಡಿ ಆಗ್ರಹಿಸಿದ್ದಾರೆ.
ಹನುಮಾನ್ ದೇವಸ್ಥಾನವನ್ನು ವಿಧಾನಸಭಾ ಸಂಕೀರ್ಣದಲ್ಲಿ ಸ್ಥಾಪನೆ ಮಾಡಬೇಕು. ಸ್ಪೀಕರ್ ಅನುಮೋದಿಸಿದರೆ, ನಾನು ಸ್ವಂತ ಖರ್ಚಿನಲ್ಲಿ ದೇವಸ್ಥಾನವನ್ನು ನಿರ್ಮಿಸುತ್ತೇನೆ ಎಂದು ಸಿ ಪಿ ಸಿಂಗ್ ಹೇಳಿದ್ದಾರೆ.