ಧರ್ಮಶಾಲಾ(ಹಿಮಾಚಲ ಪ್ರದೇಶ): ಹಿಮಾಚಲ ಪ್ರದೇಶದಲ್ಲಿ ಪ್ರತಿ ಕೆಜಿ ಹಸುವಿನ ಸಗಣಿಯನ್ನು ಎರಡು ರೂಪಾಯಿಗೆ ಖರೀದಿಸುವ ಗ್ಯಾರಂಟಿ ಈಡೇರಿಸುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಪ್ರತಿಪಕ್ಷ ಬಿಜೆಪಿ ಶಾಸಕರು ಇಂದು ವಿನೂತನ ಪ್ರತಿಭಟನೆ ನಡೆಸಿದ್ದಾರೆ. ವಿಧಾನಸೌಧಕ್ಕೆ ಬುಟ್ಟಿಗಳಲ್ಲಿ ಸಗಣಿ ತುಂಬಿಕೊಂಡು ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದರು.
ಹಿಮಾಚಲದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಮೊದಲ ದಿನದಿಂದಲೇ ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಗಿಬಿದ್ದಿರುವ ಪ್ರತಿಪಕ್ಷ ಬಿಜೆಪಿ, ಚುನಾವಣೆಯ ಸಂದರ್ಭದಲ್ಲಿ ನೀಡಿದ್ದ ಗ್ಯಾರಂಟಿಗಳ ಬಗ್ಗೆ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದೆ. ಅಧಿವೇಶನದ ಎರಡನೇ ದಿವವಾದ ಇಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಜೈರಾಮ್ ಠಾಕೂರ್ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ಕಾಂಗ್ರೆಸ್ಗೆ ತನ್ನ ಗ್ಯಾರಂಟಿಗಳನ್ನು ನೆನಪಿಸುವ ಉದ್ದೇಶದಿಂದ ಬುಟ್ಟಿಗಳಲ್ಲಿ ಸಗಣಿ ತುಂಬಿಕೊಂಡು ವಿಧಾನಸೌಧಕ್ಕೆ ಬರುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಿದರು.
ವಿಧಾನಸಭೆಯ ಹೊರಗೆ ಸಗಣಿ ತುಂಬಿದ್ದ ಬುಟ್ಟಿಗಳನ್ನು ಹಿಡಿದುಕೊಂಡು 'ಸಗಣಿ ಎರಡು ರೂಪಾಯಿಗೆ ಕಿಲೋ' ಎಂಬ ಭಿತ್ತಿಚಿತ್ರಗಳ ಪ್ರದರ್ಶನ ಹಾಗೂ ಘೋಷಣೆಗಳನ್ನು ಕೂಗುತ್ತಾ ಸರ್ಕಾರದ ವಿರುದ್ಧ ಪ್ರತಿಭಟಿಸಿದರು. ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಪ್ರತಿ ಕೆಜಿ ಹಸುವಿನ ಸಗಣಿಯನ್ನು 2 ರೂ.ಗೆ ಖರೀದಿಸುವ ಭರವಸೆ ನೀಡಿತ್ತು. ಆದರೆ, ಈಗ ಸರ್ಕಾರ ರಚನೆಯಾಗಿ ಒಂದು ವರ್ಷ ಕಳೆದರೂ ಇನ್ನೂ ರೈತರಿಂದ ಗೋವಿನ ಸಗಣಿ ಖರೀದಿ ಆರಂಭಿಸಿಲ್ಲ ಎಂದು ಟೀಕಾಪ್ರಹಾರ ನಡೆಸಿದರು.