ಗ್ವಾಲಿಯರ್ (ಮಧ್ಯಪ್ರದೇಶ) : ವ್ಯಕ್ತಿಯೊಬ್ಬರನ್ನು ಕೊಲೆ ಮಾಡಲು ಯತ್ನಿಸಿರುವ ಆರೋಪದ ಮೇಲೆ ಬಿಜೆಪಿ ಶಾಸಕನ ಪುತ್ರನನ್ನು ಬಂಧಿಸಿರುವ ಘಟನೆ ಗ್ವಾಲಿಯರ್‌ನಲ್ಲಿ ನಡೆದಿದೆ. ಗ್ವಾಲಿಯರ್ ಜಿಲ್ಲೆಯ ಜಲಾಲ್‌ಪುರ ಗ್ರಾಮದ ನಿವಾಸಿಯಾದ ರವೀಂದ್ರ ಯಾದವ್ ಎಂಬುವರು ನೀಡಿರುವ ದೂರಿನ ಮೇರೆಗೆ ಪಿಚೋರ್‌ನ ಶಾಸಕ ಪ್ರೀತಮ್ ಲೋಧಿ ಅವರ ಪುತ್ರ ಆರೋಪಿ ದಿನೇಶ್ ಲೋಧಿಯನ್ನು ಬಂಧಿಸಿದ್ದಾರೆ.
ಡಿಸೆಂಬರ್ 31 ರ ರಾತ್ರಿ ಆರೋಪಿ ದಿನೇಶ್ ಲೋಧಿ ತನ್ನ ಕಾರನ್ನು ವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ರವೀಂದ್ರ ಯಾದವ್ ಅವರ ಮನೆಯ ಹೊರಗೆ ನಿಲ್ಲಿಸಿದ್ದ ಬೈಕ್ಗೆ ಡಿಕ್ಕಿ ಹೊಡೆದಿದ್ದು, ಸ್ವಲ್ಪದರಲ್ಲೇ ಅಲ್ಲೇ ನಿಂತಿದ್ದ ರವೀಂದ್ರ ಮತ್ತು ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಘಟನೆಯ ಸಂಪೂರ್ಣ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಿರಂಜನ್ ಶರ್ಮಾ ಮಾಧ್ಯಮಗಳೊಂದಿಗೆ ಮಾಹಿತಿ ನೀಡಿದ್ದಾರೆ.