ಅಯೋಧ್ಯೆ(ಉತ್ತರಪ್ರದೇಶ) :ನಕಲಿ ಅಂಕಪಟ್ಟಿ ನೀಡಿದ ಪ್ರಕರಣದಲ್ಲಿ ಬಿಜೆಪಿ ಶಾಸಕನಿಗೆ ಶಿಕ್ಷೆ ವಿಧಿಸಿ ಅಯೋಧ್ಯೆ ವಿಶೇಷ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. 28 ವರ್ಷದ ಹಿಂದಿನ ಪ್ರಕರಣದಲ್ಲಿ ಶಾಸಕ ಸ್ಥಾನದಿಂದ ಅವರನ್ನ ಅನರ್ಹಗೊಳಿಸಿ, 5 ವರ್ಷಗಳ ಕಾಲ ಜೈಲುಶಿಕ್ಷೆ ವಿಧಿಸಲಾಗಿದೆ.
ಉತ್ತರಪ್ರದೇಶದ ಅಯೋಧ್ಯೆಯ ಗೋಸಾಯಿಗಂಜ್ ಕ್ಷೇತ್ರದ ಬಿಜೆಪಿ ಶಾಸಕ ಇಂದ್ರ ಪ್ರತಾಪ್ ಅಲಿಯಾಸ್ ಖುಬ್ಬು ತಿವಾರಿಗೆ ಸಂಬಂಧಿಸಿರುವ ಪ್ರಕರಣ ಇದಾಗಿದೆ. ಅಪರಾಧಿಗೆ ಬರೋಬ್ಬರಿ 28 ವರ್ಷಗಳ ನಂತರ ಜೈಲುಶಿಕ್ಷೆ ವಿಧಿಸಲಾಗಿದೆ.
ಏನಿದು ಪ್ರಕರಣ?
ಕಾಲೇಜು ಪ್ರವೇಶ ಪಡೆದುಕೊಳ್ಳಲು ಇಂದ್ರ ಪ್ರತಾಪ್ ನಕಲಿ ಅಂಕಪಟ್ಟಿ ಬಳಕೆ ಮಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ 1992ರಲ್ಲಿ ಅಯೋಧ್ಯೆಯ ಸಾಕೇತ್ ಪದವಿ ಕಾಲೇಜ್ನ ಪ್ರಾಂಶುಪಾಲರು ದೂರು ದಾಖಲು ಮಾಡಿದ್ದರು.
ಇದರ ವಾದ-ಪ್ರತಿವಾದ ಆಲಿಸಿರುವ ವಿಶೇಷ ಕೋರ್ಟ್ನ ನ್ಯಾಯಾಧೀಶರಾದ ಪೂಜಾ ಸಿಂಗ್, ಇದೀಗ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ. ಶಾಸಕ ಸ್ಥಾನದಿಂದ ಅವರನ್ನ ಅನರ್ಹಗೊಳಿಸಲಾಗಿದೆ. 5 ವರ್ಷಗಳ ಜೈಲು ಶಿಕ್ಷೆ ಜೊತೆಗೆ 8 ಸಾವಿರ ರೂ. ದಂಡವನ್ನೂ ವಿಧಿಸಲಾಗಿದೆ.
ಇದನ್ನೂ ಓದಿರಿ:ಟೀಂ ಇಂಡಿಯಾ ಮಾಜಿ ಕ್ರಿಕೆಟ್ ಆಟಗಾರ ವಿನೋದ್ ಕಾಂಬ್ಳಿಗೆ ವಂಚನೆ
ಇದಕ್ಕೆ ಸಂಬಂಧಿಸಿದಂತೆ ವಿಧಾನಸಭೆಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ದುಬೆ ಅಧಿಸೂಚನೆ ಹೊರಡಿಸಿದ್ದಾರೆ. ಈಗಾಗಲೇ ಅವರನ್ನ ಜೈಲಿಗೆ ಕಳುಹಿಸಲಾಗಿದೆ.