ಹೈದರಾಬಾದ್:ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಭಾರತೀಯ ರಾಷ್ಟ್ರ ಸಮಿತಿ (ಬಿಆರ್‌ಎಸ್) ವಿರುದ್ಧ ಹೋರಾಡಲು ಬಿಜೆಪಿ ತನ್ನ ಹುರಿಯಾಳುಗಳ ಮೊದಲ ಪಟ್ಟಿಯನ್ನು ಭಾನುವಾರ ಪ್ರಕಟಿಸಿತು. ಇದರಲ್ಲಿ ಮೂವರು ಹಾಲಿ ಸಂಸದರು, 12 ಮಹಿಳೆಯರು ಸೇರಿದಂತೆ 52 ಅಭ್ಯರ್ಥಿಗಳನ್ನು ಅಖೈರು ಮಾಡಲಾಗಿದೆ.
ಸಿಎಂ ವಿರುದ್ಧ ಇಬ್ಬರ ಸ್ಪರ್ಧೆ:ನವೆಂಬರ್ 30ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಟಕ್ಕರ್ ನೀಡಲು ಸಿಎಂ ಕೆಸಿಆರ್ ಸ್ಪರ್ಧಿಸಲಿರುವ ಗಜ್ವೆಲ್ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಎಟಾಲ ರಾಜೇಂದರ್ ಅವರನ್ನು ಅಖಾಡಕ್ಕೆ ಇಳಿಸಲಾಗಿದ್ದರೆ, ಕಾಮರೆಡ್ಡಿ ಕ್ಷೇತ್ರದಲ್ಲಿ ಕೆ.ವೆಂಕಟ ರಮಣ ರೆಡ್ಡಿ ಅವರು ಸ್ಪರ್ಧೆ ಮಾಡಲಿದ್ದಾರೆ. ಕೆಸಿಆರ್ ಗಜ್ವೆಲ್ ಮತ್ತು ಕಾಮರೆಡ್ಡಿ ಎರಡೂ ಕ್ಷೇತ್ರದಿಂದ ಈ ಬಾರಿ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.
ಮೂವರು ಸಂಸದರಿಗೂ ಮಣೆ ಹಾಕಲಾಗಿದೆ. ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ, ಹಾಲಿ ಸಂಸದ ಬಂಡಿ ಸಂಜಯ್ ಕುಮಾರ್ (ಕರೀಂನಗರ ಕ್ಷೇತ್ರ) ಸೋಯಂ ಬಾಪು ರಾವ್ ಮತ್ತು ಧರ್ಮಪುರಿ ಅರವಿಂದ್ ಅವರು ಕ್ರಮವಾಗಿ ಬೋತ್ ಮತ್ತು ಕೊರಟ್ಲಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.
ಅಮಾನತು ಹಿಂಪಡೆದು ಟಿಕೆಟ್:ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಅಮಾನತಾಗಿದ್ದ ಹಾಲಿ ಶಾಸಕ ಟಿ.ರಾಜಾ ಸಿಂಗ್ ಅವರಿಗೆ ಪ್ರಸ್ತುತ ಕ್ಷೇತ್ರವಾದ ಗೋಶಾಮಹಲ್ ಟಿಕೆಟ್ ನೀಡಲಾಗಿದೆ. ಕೆಲ ದಿನಗಳ ಹಿಂದಷ್ಟೇ ಅವರ ಮೇಲಿದ್ದ ಅಮಾನತನ್ನು ಹಿಂಪಡೆಯಲಾಗಿತ್ತು.