ಜೈಪುರ (ರಾಜಸ್ಥಾನ) :ಕಾಂಗ್ರೆಸ್ ಸೋಲಿಸಿ ಅಧಿಕಾರ ಹಿಡಿಯಲು ತಂತ್ರ ಹೂಡಿರುವ ಬಿಜೆಪಿ ರಾಜಸ್ಥಾನ ಜನತೆಗೆ ತನ್ನ ಭರವಸೆಗಳ ಪ್ರಣಾಳಿಕೆಯನ್ನು ಇಂದು ಬಿಡುಗಡೆ ಮಾಡಿತು. ಯಾವುದೇ ದೊಡ್ಡ ಉಚಿತಗಳನ್ನು ಘೋಷಿಸದೇ ಕಿಸಾನ್ ಸಮ್ಮಾನ್ ಯೋಜನೆಯ ಹಣ ದುಪ್ಪಟ್ಟು, ಹೆಣ್ಣು ಮಗು ಜನಿಸಿದಲ್ಲಿ ಉಳಿತಾಯ ಬಾಂಡ್, ಶಾಲಾ ಮಕ್ಕಳಿಗೆ ವಾರ್ಷಿಕ 1200 ಹಣ, ನೇಮಕಾತಿ ಪೇಪರ್ ಸೋರಿಕೆ ಪ್ರಕರಣದ ತನಿಖೆ ನಡೆಸುವ ಆಶ್ವಾಸನೆಗಳನ್ನು ನೀಡಲಾಗಿದೆ.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಹೆಚ್ಚಳ:ಈ ಯೋಜನೆಯಡಿ ರೈತರಿಗೆ ನೀಡುವ ಆರ್ಥಿಕ ಸಹಾಯವನ್ನು ವರ್ಷಕ್ಕೆ 12,000 ರೂಪಾಯಿಗೆ ಹೆಚ್ಚಿಸಲು ಪಕ್ಷವು ಆಶ್ವಾಸನೆ ನೀಡಿದೆ. ಅಂದರೆ ಈಗಿರುವ 6 ಸಾವಿರ ರೂಪಾಯಿಗೆ ಇನ್ನೂ 6 ಸಾವಿರ ಹೆಚ್ಚುವರಿಯಾಗಿ ನೀಡಲಾಗುವುದು ಎಂದು ಪಕ್ಷ ಹೇಳಿದೆ.
ಉಳಿತಾಯ ಬಾಂಡ್ ಯೋಜನೆ:ಲಾಹೋ ಪ್ರೋತ್ಸಾಹ ಯೋಜನೆ ಹೆಸರಿನಲ್ಲಿ ಬಡ ಕುಟುಂಬದಲ್ಲಿ ಹೆಣ್ಣುಮಕ್ಕಳು ಜನಿಸಿದಲ್ಲಿ ಅವರಿಗೆ ಉಳಿತಾಯದ ಬಾಂಡ್ ಅನ್ನು ಒದಗಿಸಲಾಗುವುದು. ಬಾಂಡ್ ಮಗುವಿನ 6ನೇ ತರಗತಿಯಲ್ಲಿ 26,000 ರೂ., 9ನೇ ತರಗತಿಯಲ್ಲಿ 18,000 ರೂ., 10ನೇ ತರಗತಿಯಲ್ಲಿ 10,000ರೂ., 11ನೇ ತರಗತಿಯಲ್ಲಿ 12,000 ರೂ., 12ನೇ ತರಗತಿಯಲ್ಲಿ 14,000 ರೂ., ವೃತ್ತಿ ಕೋರ್ಸ್ಗಳ ಮೊದಲ ಮತ್ತು ಕೊನೆಯ ವರ್ಷದಲ್ಲಿ 50,000 ರೂ. ನೀಡುತ್ತದೆ. 21ನೇ ವಯಸ್ಸಿನಲ್ಲಿ ಒಟ್ಟು 1 ಲಕ್ಷ ರೂ. ಹಣ ಸಿಗಲಿದೆ.
ನೇರ ಲಾಭ ವರ್ಗಾವಣೆ:ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳ ವಿದ್ಯಾರ್ಥಿಗಳಿಗೆ ನೆರವಾಗಲು ಶಾಲಾ ಬ್ಯಾಗ್‌ಗಳು, ಪುಸ್ತಕಗಳು ಮತ್ತು ಸಮವಸ್ತ್ರಗಳನ್ನು ಖರೀದಿಸಲು ವಾರ್ಷಿಕವಾಗಿ 1,200 ರೂಪಾಯಿ ರವು ಸಿಗಲಿದೆ. ಆರೋಗ್ಯ ಸೌಕರ್ಯಗಳನ್ನು ಆಧುನೀಕರಣಗೊಸುವ ಗುರಿಯೊಂದಿಗೆ ಈ ಮಿಷನ್‌ನಲ್ಲಿ 40,000 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲು ಯೋಜಿಸಿದೆ.