ಕರ್ನಾಟಕ

karnataka

ETV Bharat / bharat

ಆಕ್ಸಿಜನ್ ಸಿಲಿಂಡರ್-ಮಾಸ್ಕ್​ ಧರಿಸಿ ವಿಧಾನಸಭೆಗೆ ಬಂದ ಬಿಜೆಪಿ ಶಾಸಕರು! - ಗ್ಯಾಸ್​​ ಚೇಂಬರ್​ನಲ್ಲಿ ವಾಸಿಸುವಂತಾಗಿರುವ ದೆಹಲಿ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಸಮಸ್ಯೆ ಮುಂದುವರೆದಿದೆ. ವಾಯುಮಾಲಿನ್ಯದಿಂದ ಬಳಲುತ್ತಿರುವ ದೆಹಲಿ ನಿವಾಸಿಗಳ ಸಮಸ್ಯೆಗಳ ಬಗ್ಗೆ ರಾಷ್ಟ್ರದ ಗಮನಸೆಳೆಯುವ ನಿಟ್ಟಿನಲ್ಲಿ ಬಿಜೆಪಿ ಶಾಸಕರು ಆಮ್ಲಜನಕ ಸಿಲಿಂಡರ್‌ಗಳನ್ನು ಮತ್ತು ಆಮ್ಲಜನಕ ಮಾಸ್ಕ್‌ಗಳನ್ನು ಧರಿಸಿ ದೆಹಲಿ ವಿಧಾನಸಭೆ ಅಧಿವೇಶನದಲ್ಲಿ ಭಾಗವಹಿಸಲು ಆಗಮಿಸಿದರು.

Delhi Assembly BJP MLAs sport oxygen cylinders gas masks
Delhi Assembly BJP MLAs sport oxygen cylinders gas masks

By

Published : Jan 16, 2023, 1:04 PM IST

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿನ ತೀವ್ರ ವಾಯುಮಾಲಿನ್ಯ ಸಮಸ್ಯೆಯನ್ನು ಜಗತ್ತಿಗೆ ಎತ್ತಿತೋರಿಸುವ ನಿಟ್ಟಿನಲ್ಲಿ ಸೋಮವಾರ ಭಾರತೀಯ ಜನತಾ ಪಕ್ಷದ ಶಾಸಕರು ಆಮ್ಲಜನಕ ಸಿಲಿಂಡರ್‌ಗಳನ್ನು ಮತ್ತು ಆಮ್ಲಜನಕ ಮಾಸ್ಕ್‌ಗಳನ್ನು ಧರಿಸಿ ದೆಹಲಿ ವಿಧಾನಸಭೆ ಅಧಿವೇಶನದಲ್ಲಿ ಭಾಗವಹಿಸಲು ಆಗಮಿಸಿ ಗಮನಸೆಳೆದರು. ವಿಧಾನಸಭೆಯ 4ನೇ ಹಂತದ ಅಧಿವೇಶನವು ಇಂದು ಬೆಳಗ್ಗೆ 11 ಗಂಟೆಗೆ ಆರಂಭವಾಯಿತು.

ಬಿಜೆಪಿ ಮತ್ತು ಆಡಳಿತಾರೂಢ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ (ಎಎಪಿ) ಇತ್ತೀಚೆಗೆ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಮೇಯರ್ ಚುನಾವಣೆಯ ಸಂದರ್ಭದಲ್ಲಿ ಮುಖಾಮುಖಿಯಾಗಿದ್ದವು. ನಗರದಲ್ಲಿ ತಲೆದೋರಿರುವ ವಾಯು ಮಾಲಿನ್ಯ ಸಮಸ್ಯೆಯು ಎರಡು ಪಕ್ಷಗಳ ನಡುವಿನ ಸಂಘರ್ಷದ ಮೂಲವಾಗಿದೆ ಮತ್ತು ಇತ್ತೀಚೆಗೆ ನಗರದಲ್ಲಿ ನಡೆದ ಮುನ್ಸಿಪಲ್ ಚುನಾವಣೆಯ ಸಮಯದಲ್ಲಿ ಪ್ರಮುಖ ವಿಷಯವಾಗಿತ್ತು. ರಾಷ್ಟ್ರ ರಾಜಧಾನಿಯಲ್ಲಿ ಮಾಲಿನ್ಯ ನಿಯಂತ್ರಿಸುವಲ್ಲಿ ಆಪ್ ಸರ್ಕಾರ ವಿಫಲವಾಗಿದೆ ಎಂದು ಬಿಜೆಪಿ ದೂರುತ್ತಿದೆ.

ಗ್ಯಾಸ್​ ಸಿಲಿಂಡರ್ ಧರಿಸಿ ಆಗಮಿಸುವ ಮೂಲಕ, ಗ್ಯಾಸ್​​ ಚೇಂಬರ್​ನಲ್ಲಿ ವಾಸಿಸುವಂತಾಗಿರುವ ದೆಹಲಿಯ ಎರಡು ಕೋಟಿ ಜನರ ಧ್ವನಿಯನ್ನು ನಾನು ವಿಧಾನಸಭೆಯಲ್ಲಿ ಎತ್ತಲಿದ್ದೇನೆ. ದೆಹಲಿಯನ್ನು ಮಾಲಿನ್ಯ ಮುಕ್ತಗೊಳಿಸಲು ಆಪ್​ ಸರ್ಕಾರ ಏನು ಮಾಡಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಶಾಸಕ ವಿಜೇಂದರ್ ಗುಪ್ತಾ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಶಾಸಕ ವಿಜೇಂದರ್ ಗುಪ್ತಾ ಅವರೊಂದಿಗೆ ಪ್ರತಿಪಕ್ಷ ನಾಯಕ ರಾಮವೀರ್ ಸಿಂಗ್ ಬಿಡ್ಗುರಿ, ಓಪಿ ಶರ್ಮಾ ಮತ್ತು ಅಭಯ್ ವರ್ಮಾ ಆಮ್ಲಜನಕ ಸಿಲಿಂಡರ್‌ಗಳನ್ನು ಮತ್ತು ಆಮ್ಲಜನಕ ಮಾಸ್ಕ್‌ಗಳನ್ನು ಧರಿಸಿ ಅಧಿವೇಶನಕ್ಕೆ ಆಗಮಿಸಿದರು.

ಸೋಮವಾರ ಬೆಳಗ್ಗೆ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ (AQI) 337 ಆಗಿದ್ದು, ದೆಹಲಿಯಲ್ಲಿನ ಗಾಳಿಯ ಗುಣಮಟ್ಟವು ಅತ್ಯಂತ ಕಳಪೆ ವಿಭಾಗದಲ್ಲಿ ಮುಂದುವರೆದಿದೆ. ರಾಷ್ಟ್ರೀಯ ರಾಜಧಾನಿ ಪ್ರದೇಶ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿನ ವಾಯು ಗುಣಮಟ್ಟ ನಿರ್ವಹಣಾ ಆಯೋಗವು ಜನವರಿ 15 ರಂದು ತನ್ನ ಸಭೆಯ ನಂತರ, ತನ್ನ ಜನವರಿ 6 ರ ಆದೇಶವನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದೆ. ಜನವರಿ 6ರ ಆದೇಶದಲ್ಲಿ GRAP ಯ ಹಂತ IIIರ ಅಡಿಯಲ್ಲಿ ಹಲವಾರು ನಿರ್ಬಂಧಗಳನ್ನು ವಿಧಿಸಲಾಗಿತ್ತು. ಇದರ ಪ್ರಕಾರ ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ಅಗತ್ಯವಲ್ಲದ ಎಲ್ಲ ನಿರ್ಮಾಣ ಕಾಮಗಾರಿಗಳನ್ನು ಮತ್ತು ಕಟ್ಟಡ ನೆಲಸಮ ಚಟುವಟಿಕೆಗಳನ್ನು ನಿಷೇಧಿಸಲಾಗಿತ್ತು.

ಆದಾಗ್ಯೂ, ಪ್ರಸ್ತುತ ಸನ್ನಿವೇಶವನ್ನು ಪರಿಗಣಿಸಿ, ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್‌ನ ಹಂತ I ಮತ್ತು ಹಂತ II ರ ಅಡಿಯಲ್ಲಿ ಕ್ರಮಗಳನ್ನು ಅನ್ವಯಿಸಲಾಗುತ್ತದೆ ಎಂದು ಆಯೋಗ ಹೇಳಿದೆ. ಎನ್‌ಸಿಆರ್‌ನಲ್ಲಿನ ಎಲ್ಲಾ ಸಂಬಂಧಿತ ಇಲಾಖೆಗಳ ಮೇಲ್ವಿಚಾರಣೆ ಮತ್ತು ಪರಿಶೀಲನೆಗಳ ಮೂಲಕ AQI ಮಟ್ಟಗಳು ಮತ್ತೆ ತೀವ್ರ ಕಳಪೆ ವರ್ಗಕ್ಕೆ ಜಾರದಂತೆ ನೋಡಿಕೊಳ್ಳಲಾಗುತ್ತಿದೆ. ಉಪಸಮಿತಿಯು ಗಾಳಿಯ ಗುಣಮಟ್ಟದ ಸನ್ನಿವೇಶದ ಮೇಲೆ ತೀವ್ರ ನಿಗಾ ಇಡಲಿದೆ ಮತ್ತು ವಾಯು ಗುಣಮಟ್ಟ ಮತ್ತು ಕಾಲಕಾಲಕ್ಕೆ ಭಾರತೀಯ ಹವಾಮಾನ ಇಲಾಖೆ ನೀಡುವ ಮುನ್ಸೂಚನೆಯನ್ನು ಅವಲಂಬಿಸಿ ಪರಿಸ್ಥಿತಿಯನ್ನು ಪರಿಶೀಲಿಸುತ್ತದೆ ಎಂದು ಆಯೋಗ ಹೇಳಿದೆ.

ಏತನ್ಮಧ್ಯೆ, ದೆಹಲಿಯಲ್ಲಿ ಸರ್ಕಾರದ ಅಧಿಕಾರ ವ್ಯಾಪ್ತಿಗೆ ಸಂಬಂಧಿಸಿದಂತೆ ಕಳೆದ ದಿನಗಳಲ್ಲಿ ಚುನಾಯಿತ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ನಡುವೆ ನಡೆದ ಜಟಾಪಟಿಯನ್ನು ಗಮನದಲ್ಲಿಟ್ಟುಕೊಂಡು ಆಡಳಿತ ಪಕ್ಷದ ಶಾಸಕರು ಇಂದು ವಿಧಾನಸಭೆಯಲ್ಲಿ ಈ ವಿಷಯ ಚರ್ಚಿಸಲು ಪ್ರಸ್ತಾಪ ಮುಂದಿಡಬಹುದು ಎನ್ನಲಾಗಿದೆ.

ಇದನ್ನೂ ಓದಿ: 'ವೈವಾಹಿಕ ಅತ್ಯಾಚಾರ': ಕೇಂದ್ರ ಸರ್ಕಾರದ ಅಭಿಪ್ರಾಯ ಕೇಳಿದ ಸುಪ್ರೀಂ ಕೋರ್ಟ್‌

ABOUT THE AUTHOR

...view details