ನವದೆಹಲಿ: ಕೃಷಿ ಮಸೂದೆ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟ ಮುಂದುವರಿದಿದ್ದು, ರೈತರೊಂದಿಗಿನ ಸರ್ಕಾರದ ಮಾತುಕತೆ ಫಲ ನೀಡಿಲ್ಲ. ಕೇಂದ್ರ ಕೃಷಿ ಸಚಿವರೊಂದಿಗಿನ ಮಾತುಕತೆ ಬಳಿಕವೂ ರೈತ ಸಂಘಟನೆಗಳು ತಮ್ಮ ಪಟ್ಟು ಸಡಿಲಿಸುತ್ತಿಲ್ಲ.
ರೈತರು ಎಂಎಸ್ಪಿ (ಕನಿಷ್ಠ ಬೆಂಬಲ ಬೆಲೆ) ಕುರಿತು ಸರ್ಕಾರ ಸ್ಪಷ್ಟ ನಿಲುವು ತೋರುವವೆರಗೂ ಪ್ರತಿಭಟನೆ ನಡೆಸಲಾಗುವುದು ಎಂದಿದ್ದು, ಮೊದಲ ಮಾತುಕತೆಯಲ್ಲಿಯೂ ಇದೇ ವಿಷಯ ಚರ್ಚೆಯಾಗಿದೆ.
ಮೊದಲ ಭೇಟಿಯಲ್ಲಿ ರೈತರು ಪ್ರತಿಭಟನೆ ಕೊನೆಗಾಣಿಸಲ್ಲ ಎಂಬುದು ಸರ್ಕಾರಕ್ಕೂ ಮನದಟ್ಟಾಗಿತ್ತು. ಹೀಗಾಗಿ ಆ ಭೇಟಿ ಸಹ ಹೆಚ್ಚು ಪ್ರಾಮುಖ್ಯತೆ ಗಳಿಸದೇ ಕೇವಲ ಅನೌಪಚಾರಿಕ ಎನಿಸಿಕೊಂಡಿತು. ಈ ಸಭೆಯಲ್ಲಿ ಪ್ರಮುಖವಾಗಿ ರೈತರು ಕೇಂದ್ರದ ಕೃಷಿ ಮಸೂದೆಗಳ ಹಿಂಪಡೆಯುವಂತೆ ಆಗ್ರಹಿಸಲಾಯಿತು. ನೂತನ ಕಾಯ್ದೆಯಲ್ಲಿ ಎಂಎಸ್ಪಿಯನ್ನು ಹಂತ ಹಂತವಾಗಿ ರೈತರಿಂದ ದೂರ ಮಾಡುವ ಹುನ್ನಾರವಿದೆ. ಹೀಗಾಗಿ ಎಂಎಸ್ಪಿ ಕುರಿತು ಸರ್ಕಾರ ಸ್ಪಷ್ಟ ನಿಲುವು ತಾಳಬೇಕಿದೆ ಎಂಬುದು ಸಭೆಯ ನಿರ್ಣಾಯಕವಾಗಿತ್ತು.
ಅಲ್ಲದೆ ರೈತರ ಪ್ರತಿಭಟನೆ ದೆಹಲಿಯಲ್ಲಿ ತೀವ್ರ ಸ್ವರೂಪ ಪಡೆದಿದ್ದು, ಬುಕಾರಿ ಪಾರ್ಕ್ನಲ್ಲಿ ಪ್ರತಿಭಟನೆಗೆ ಅವಕಾಶ ನೀಡುವುದು ಎಂದರೆ ರೈತರನ್ನು ಜೈಲಿಗೆ ಕಳುಹಿಸುವುದು ಎಂದು ಕೇಂದ್ರದ ವಿರುದ್ಧ ರೈತ ನಾಯಕರು ಆರೋಪಿಸಿದ್ದಾರೆ.
ಈ ಕುರಿತಂತೆ ಈಟಿವಿ ಭಾರತದೊಂದಿಗೆ ಮಾತನಾಡಿದ ಬಿಜೆಪಿ ಹಿರಿಯ ನಾಯಕರೊಬ್ಬರು. ‘ಈ ಕೃಷಿ ಮಸೂದೆಗಳಿಂದ ಪಂಜಾಬ್ ರೈತರಿಗೆ ಮಾತ್ರ ಸಮಸ್ಯೆಗಳಾಗಿವೆ. ದೇಶದ ಬೇರಾವ ಪ್ರದೇಶದಲ್ಲೂ ಮಸೂದೆ ವಿರುದ್ಧ ಪ್ರತಿಭಟನೆ, ವಿರೋಧವಿಲ್ಲ. ರೈತ ಚಳವಳಿಯ ಸೋಗಿನಲ್ಲಿ ಪಂಜಾಬ್ನಲ್ಲಿ ಮತ್ತೆ ಅಸ್ಥಿರತೆ ಉಂಟುಮಾಡುವುದೇ ಇದರ ಉದ್ದೇಶ, ಇದಷ್ಟೇ ಈ ಪ್ರತಿಭಟನೆಯ ವಾಸ್ತವ’ ಎಂದು ಆರೋಪಿಸಿದ್ದಾರೆ.
‘ಪ್ರತಿಭಟನೆಯಲ್ಲಿ ಪ್ರಧಾನಿ ವಿರುದ್ಧ ಆಕ್ಷೇಪಾರ್ಹ ಬರಹ, ಪೋಸ್ಟರ್ ಪ್ರದರ್ಶಿಸುವುದು, ಪ್ರತ್ಯೇಕ ಖಲಿಸ್ತಾನ್ ಘೋಷಣೆ ಕೂಗುವುದು. ಇದು ನಿಜವಾದ ರೈತಪ್ರತಿಭಟನೆಯ ಸ್ವರೂಪವಲ್ಲ’ ಎಂದಿದ್ದಾರೆ.
‘ಈಗ ಬಿಜೆಪಿ ಮಸೂದೆಯನ್ನು ಬೇರೆ ದೇಶದ ರೈತರ ಮುಂದಿಡಲು ಸಿದ್ಧತೆ ನಡೆಸಿದೆ. ತಜ್ಞರ ಮೂಲಕ ಇದಕ್ಕಾಗಿ ಕಾರ್ಯಕ್ರಮ ರೂಪಿಸಿದೆ. ಆ ರೈತರಿಂದ ಯಾವ ಉತ್ತರ ಸಿಗಲಿಗೆ ಅದರ ಅರ್ಹತೆಯ ಆಧಾರದ ಮೇಲೆ ದೇಶದ ರೈತರ ಮುಂದಿಡಲು ನಿರ್ಧರಿಸಿದ್ದೇವೆ’ ಎಂದಿದ್ದಾರೆ.
ಮಂಗಳವಾರ ನಡೆದಿರುವ ರೈತರೊಂದಿಗಿನ ಸಭೆಯಲ್ಲಿಕೇಂದ್ರ ಸಚಿವರು ಕೃಷಿ ಕಾನೂನುಗಳಲ್ಲಿನ ಭಿನ್ನಾಭಿಪ್ರಾಯಗಳನ್ನು ವಿಂಗಡಿಸಿ ಚರ್ಚಿಸಲು ಸಮಿತಿಯೊಂದನ್ನು ರಚಿಸುವ ಪ್ರಸ್ತಾಪವನ್ನು ಮುಂದಿಟ್ಟರು. ಆದರೆ ರೈತರು ಇದಕ್ಕೆ ಒಪ್ಪಿಗೆ ಸೂಚಿಸಿಲ್ಲ. ನಾಳೆ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ.
ಇದನ್ನೂ ಓದಿ: ಡಿ. 3ರಂದು ರೈತರೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ: ಕೇಂದ್ರ ಕೃಷಿ ಸಚಿವ