ಹೈದರಾಬಾದ್:18 ವರ್ಷಗಳ ನಂತರ ಬಿಜೆಪಿ ಮತ್ತೊಮ್ಮೆ ಹೈದರಾಬಾದ್ನಲ್ಲಿ ಕಾರ್ಯಕಾರಿಣಿ ಸಭೆ ನಡೆಸುತ್ತಿದೆ. ಮಹಾರಾಷ್ಟ್ರದಲ್ಲಿ ಅಧಿಕಾರದ ಗದ್ದುಗೆಗೆ ಏರಿ ಮತ್ತೊಂದು ರಾಜಕೀಯ ಯಶಸ್ಸು ಪಡೆದಿರುವ ಬಿಜೆಪಿ ಈಗ ದಕ್ಷಿಣ ರಾಜ್ಯಗಳ ಮೇಲೆ ಹೆಚ್ಚಿನ ಗಮನ ಹರಿಸಿದೆ. ಅದರಲ್ಲೂ ಮುಂದಿನ ವರ್ಷ ವಿಧಾನಸಭಾ ಚುನಾವಣೆ ಎದುರಿಸಲಿರುವ ತೆಲಂಗಾಣದ ಮೇಲೆ ಬಿಜೆಪಿ ಅತಿ ಹೆಚ್ಚು ಗಮನ ನೀಡುತ್ತಿದೆ. ದಕ್ಷಿಣದಲ್ಲಿ ಕರ್ನಾಟಕದ ನಂತರ ಬಿಜೆಪಿ ಅಧಿಕಾರದ ಆಸೆ ಕಾಣಬಹುದಾದ ಮತ್ತೊಂದು ರಾಜ್ಯ ಎಂದರೆ ಅದು ತೆಲಂಗಾಣ.
ಹೈದರಾಬಾದ್ನಲ್ಲಿ ನಡೆಯುತ್ತಿರುವ 48 ಗಂಟೆಗಳ ಬಿಡುವಿಲ್ಲದ ಸಭೆಗಳಲ್ಲಿ ಭಾಗವಹಿಸಲು ನಿಗದಿಯಾಗಿರುವ 345ರಲ್ಲಿ 300 ಜನ ಮುಖಂಡರು ಈಗಾಗಲೇ ಹೈದರಾಬಾದಿಗೆ ಆಗಮಿಸಿದ್ದಾರೆ. ಸಂಜೆಯ ಹೊತ್ತಿಗೆ ಕಾರ್ಯಕಾರಿಣಿ ಸಭೆ ನಡೆಯುವ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಕೂಡ ಆಗಮಿಸಲಿದ್ದಾರೆ. ಇನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಈಗಾಗಲೇ ಬೆಳಗ್ಗೆ 10 ಗಂಟೆಯಷ್ಟೊತ್ತಿಗೆ ಹೈದರಾಬಾದಿಗೆ ಆಗಮಿಸಿದ್ದಾರೆ. ನಡ್ಡಾ ಮಾಧ್ಯಮದವರ ಯಾವುದೇ ಪ್ರಶ್ನೆಗಳಿಗೂ ಉತ್ತರಿಸದೇ ತೆರಳಿದರು.
ಕಾರ್ಯಕಾರಿಣಿ ಸಭೆಗೆ ಆಗಮಿಸುತ್ತಿರುವ ಬಿಜೆಪಿ ಮುಖಂಡರು ಮಾಧ್ಯಮದವರೊಂದಿಗೆ ಯಾವುದೇ ಮಾತು ಆಡುತ್ತಿಲ್ಲ ಎಂಬುದು ಗಮನಾರ್ಹವಾಗಿದೆ. ಬಿಜೆಪಿ ತನ್ನ ಪ್ರತಿಸ್ಪರ್ಧಿಗಳಾದ ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಹಾಗೂ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರಿಗೆ ತಾನು ಸಹ ಇಲ್ಲಿ ಬಲಿಷ್ಠ ಎಂಬ ರಾಜಕೀಯ ಸಂದೇಶ ನೀಡಲೆಂದೇ ಹೈದರಾಬಾದಿನಲ್ಲಿ ಕಾರ್ಯಕಾರಿಣಿ ಆಯೋಜಿಸಲಾಗಿದೆ ಎನ್ನಲಾಗಿದೆ.