ಮುಂಬೈ:ಉದ್ಧವ್ ಠಾಕ್ರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಈ ಮೂಲಕ ಮಹಾರಾಷ್ಟ್ರ ಸರ್ಕಾರ ಪತನವಾಗಿದೆ. ಈ ಬೆಳವಣಿಗೆ ತಾಜ್ ಪ್ರೆಸಿಡೆಂಟ್ ಹೋಟೆಲ್ನಲ್ಲಿ ನಡೆಯುತ್ತಿದ್ದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಸಂಭ್ರಮ ಉಂಟುಮಾಡಿತು. ಶಾಸಕರು ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಪರ ಘೋಷಣೆಗಳನ್ನು ಮೊಳಗಿಸಿದರು.
ನಾಳೆ ವಿಶ್ವಾಸ ಮತಯಾಚನೆಗೆ ಸುಪ್ರೀಂಕೋರ್ಟ್ ಸೂಚಿಸಿದ ಬೆನ್ನಲ್ಲೇ, ಸಿಎಂ ಉದ್ಧವ್ ಠಾಕ್ರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದರಿಂದಾಗಿ ನಾಳೆ ವಿಶ್ವಾಸ ಮತಯಾಚನೆ ನಡೆಯುವ ಸಾಧ್ಯತೆ ತೀರಾ ಕಡಿಮೆ.
ಸರ್ಕಾರ ಪತನವಾಗುವ ಸುಳಿವು ಅರಿತಿದ್ದ ಬಿಜೆಪಿ ಹೋಟೆಲ್ನಲ್ಲಿ ಸೇರಿ ಶಾಸಕಾಂಗ ಸಭೆ ನಡೆಸಿತು. ಈ ಸಂದರ್ಭದಲ್ಲಿ ಸರ್ಕಾರ ಉರುಳಿದ ಬಳಿಕ ಮುಂದಿನ ನಡೆಗಳ ಬಗ್ಗೆ ಚರ್ಚಿಸಲಾಗಿದೆ.
ಠಾಕ್ರೆ ರಾಜೀನಾಮೆ ಘೋಷಿಸುತ್ತಿದ್ದಂತೆ, ಮಾಜಿ ಸಿಎಂ ದೇವೇಂದ್ರ ಫಡ್ನವೀಸ್, ಪಕ್ಷದ ರಾಜ್ಯಾಧ್ಯಕ್ಷ ಚಂದ್ರಕಾಂತ ಪಾಟೀಲ್, ಇತರೆ ನಾಯಕರು ಸಿಹಿ ಹಂಚಿ ಹರ್ಷ ವ್ಯಕ್ತಪಡಿಸಿದರು. ಬಳಿಕ ಎಲ್ಲ ನಾಯಕರು ಮುಂದಿನ ಸಿಎಂ ಫಡ್ನವೀಸ್ ಎಂದು ಘೋಷಣೆ ಕೂಗಿದರು.
ಬಿಜೆಪಿಯಿಂದ ಸರ್ಕಾರ ರಚನೆ?:ನಾಳೆ ಬಿಜೆಪಿ ನಾಯಕರು ದೇವೇಂದ್ರ ಫಡ್ನವೀಸ್ ನೇತೃತ್ವದಲ್ಲಿ ರಾಜ್ಯಪಾಲರ ಬಳಿಗೆ ತೆರಳಿ ಸರ್ಕಾರ ರಚನೆ ಮಾಡುವ ಹಕ್ಕು ಮಂಡಿಸುವ ಸಾಧ್ಯತೆ ದಟ್ಟವಾಗಿದೆ.
ಮಹಾರಾಷ್ಟ್ರ ವಿಧಾನಸಭೆಯ 288 ಸ್ಥಾನಗಳಲ್ಲಿ ಬಿಜೆಪಿ 105 ಸದಸ್ಯ ಬಲ ಹೊಂದಿದೆ. ಅತಿದೊಡ್ಡ ಪಕ್ಷವಾಗಿರುವ ಬಿಜೆಪಿ ಬಂಡೆದ್ದ ಶಿವಸೇನೆ ಶಾಸಕರ ಜೊತೆ ಮೈತ್ರಿ ಮಾಡಿಕೊಂಡು ಮುಂದಿನ ಅವಧಿಗೆ ಸರ್ಕಾರ ರಚನೆ ಮಾಡಬಹುದು.
ಇದನ್ನೂ ಓದಿ:ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ