ಕರ್ನಾಟಕ

karnataka

ETV Bharat / bharat

ತಮಿಳುನಾಡಿನಲ್ಲಿ ಹಾಸ್ಯ ಕಲಾವಿದನ ಮೇಲೆ ಹಲ್ಲೆ ಆರೋಪ: ಪತ್ನಿ, ಬಿಜೆಪಿ ಮುಖಂಡ ಸೇರಿ ಆರು ಜನರ ಬಂಧನ - ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಕಾಮೆಂಟ್‌

ತಮಿಳುನಾಡಿನ ಮಧುರೈಯಲ್ಲಿ ಹಾಸ್ಯ ಕಲಾವಿದ ವೆಂಕಟೇಶನ್ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ವೆಂಕಟೇಶನ್ ಪತ್ನಿ, ಕಾರು ಚಾಲಕ ಹಾಗೂ ಬಿಜೆಪಿ ಮುಖಂಡ, ಕಾರ್ಯಕರ್ತರು ಸೇರಿ ಆರು ಮಂದಿ ಬಂಧಿಸಲಾಗಿದೆ.

bjp-leader-workers-held-for-assaulting-tv-artist-in-madurai
ತಮಿಳುನಾಡಿನಲ್ಲಿ ಹಾಸ್ಯ ಕಲಾವಿದನ ಮೇಲೆ ಹಲ್ಲೆ ಆರೋಪ: ಪತ್ನಿ, ಬಿಜೆಪಿ ಮುಖಂಡ ಸೇರಿ ಆರು ಜನರ ಬಂಧನ

By

Published : Jun 18, 2023, 7:44 PM IST

ಮಧುರೈ (ತಮಿಳುನಾಡು): ಹಾಸ್ಯ ಕಲಾವಿದರೊಬ್ಬರ ಮೇಲೆ ಹಲ್ಲೆ ಮಾಡಿದ ತಮಿಳುನಾಡು ಬಿಜೆಪಿಯ ಎಸ್‌ಸಿ/ಎಸ್‌ಟಿ ವಿಭಾಗದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ವೈರಮುತ್ತು ಸೇರಿ ಆರು ಜನರನ್ನು ಮಧುರೈ ಪೊಲೀಸರು ಬಂಧಿಸಿದ್ದಾರೆ. ಜೂನ್ 15ರಂದು ಹಾಸ್ಯ ಕಲಾವಿದ ವೆಂಕಟೇಶನ್​ ಮೇಲೆ ಬಿಜೆಪಿ ಪದಾಧಿಕಾರಿಗಳು ದಾಳಿ ಮಾಡಿದ್ದರು ಎನ್ನಲಾಗಿದೆ.

ಇಲ್ಲಿನ ತಬಲ್ ತಂತಿ ನಗರದ ನಿವಾಸಿ ವೆಂಕಟೇಶನ್ ತಮಿಳಿನ 'ಕರುಪ್ಪಸಾಮಿ ಕುಥಗೈತರರ್' ಚಲನಚಿತ್ರದಲ್ಲಿ ನಟಿಸಿದ್ದಾರೆ. ದೂರದರ್ಶನ ವಾಹಿನಿಯೊಂದರಲ್ಲಿ ಪ್ರಸಾರವಾಗುವ ತಮ್ಮ ಹಾಸ್ಯ ಕಾರ್ಯಕ್ರಮ 'ಕಳಕ್ಕಪೋವತು ಕಾಯಿ' ಮೂಲಕ ಹೆಸರುವಾಸಿಯಾಗಿದ್ದಾರೆ. ವೆಂಕಟೇಶನ್​ ಮತ್ತು ಪತ್ನಿ ಭಾನುಮತಿ ನಡುವೆ ಕೌಟುಂಬಿಕ ಕಲಹ ಏರ್ಪಟ್ಟಿತ್ತು. ತಮ್ಮ ಪತಿ ವಿವಾಹಯೇತರ ಸಂಬಂಧ ಹೊಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಮಹಿಳೆಯರೊಂದಿಗೆ ಡೇಟಿಂಗ್ ಮಾಡುತ್ತಿದ್ದಾನೆ ಎಂದು ಅನುಮಾನದ ಮೇಲೆ ಪತ್ನಿ ಜಗಳವಾಡುತ್ತಿದ್ದರು ಎಂದು ವರದಿಯಾಗಿದೆ.

ಅಂತೆಯೇ, ಭಾನುಮತಿ ತನ್ನ ಪತಿಯ ಮೇಲೆ ಹಲ್ಲೆ ನಡೆಸಲು ಸಂಚು ರೂಪಿಸಿದ್ದರು. ಈ ಹಂತದಲ್ಲಿ ಭಾನುಮತಿ ಅವರು ವೆಂಕಟೇಶನ್​ ಕಾರು ಚಾಲಕ ಮೋಹನ್ ಮೂಲಕ ರಾಜ್‌ಕುಮಾರ್ ಎಂಬುವವರನ್ನು ಸಂಪರ್ಕಿಸಿದ್ದರು. ಆದರೆ, ತನ್ನ ಈ ಯೋಜನೆಯಲ್ಲಿ ಯಾವುದೋ ಗೊಂದಲ ಉಂಟಾಗಿದೆ. ಆದ್ದರಿಂದ ಭಾನುಮತಿ ತಮ್ಮ ಸಂಬಂಧಿಯಾದ ಬಿಜೆಪಿ ಮುಖಂಡ ವೈರಮುತ್ತು ಅವರನ್ನು ಸಂಪರ್ಕಿಸಿ ತನ್ನ ಸಮಸ್ಯೆಯ ಬಗ್ಗೆ ಹೇಳಿಕೊಂಡಿದ್ದರು. ಈ ವೇಳೆ ವೈರಮುತ್ತು ಸಹಾಯ ಮಾಡುವುದಾಗಿ ಭಾನುಮತಿ ಅವರಿಗೆ ಭರವಸೆ ನೀಡಿದ್ದರು.

ಇದೇ ವಿಷಯವಾಗಿ ನಂತರ ವೈರಮುತ್ತು ಬಿಜೆಪಿ ಪದಾಧಿಕಾರಿಗಳನ್ನು ಭೇಟಿ ಮಾಡಿದ್ದರು. ಈ ಸಮಯದಲ್ಲಿ ಹಾಸ್ಯ ಕಲಾವಿದರಾದ ವೆಂಕಟೇಶನ್ ಡಿಎಂಕೆ ಬೆಂಬಲಿಗರಾಗಿದ್ದಾರೆ. ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಕಾಮೆಂಟ್‌ ಹಾಗೂ ಪೋಸ್ಟ್​ಗಳನ್ನು ಮಾಡುತ್ತಿದ್ದಾರೆ ಎಂದು ಗೊತ್ತಾಗಿದೆ.

ಇದರ ಬೆನ್ನಲ್ಲೇ ವೈರಮುತ್ತು ನಿರ್ದೇಶನದ ಬಿಜೆಪಿ ಪದಾಧಿಕಾರಿಗಳು ಶನಿವಾರ ತಬಲ್ ತಂತಿನಗರ ಬಳಿ ವೆಂಕಟೇಶನ್​ ತೆರಳುತ್ತಿದ್ದ ಕಾರನ್ನು ಅಡ್ಡಗಟ್ಟಿದ್ದಾರೆ. ಅಲ್ಲದೇ, ಕಾರಿನ ಚಾಲಕನಿಗೆ ಚಾಕುವಿನಿಂದ ಬೆದರಿಸಿದ್ದರು. ಅಲ್ಲಿಂದ ವೆಂಕಟೇಶನ್​ ಅವರನ್ನು ನಾರಾಯಣಪುರಕ್ಕೆ ಅಪಹರಿಸಿ ಇನ್ಮುಂದೆ ಬಿಜೆಪಿ ನಾಯಕರ ಮೇಲೆ ಕಮೆಂಟ್ ಹಾಕಬೇಡ ಎಂದು ಹೇಳಿ ಹಲ್ಲೆ ನಡೆಸಿದ್ದರು ಎಂದು ಹೇಳಲಾಗಿದೆ.

ಇದರಿಂದ ಗಾಯಗೊಂಡ ವೆಂಕಟೇಶನ್​ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಮತ್ತೊಂದೆಡೆ, ಇದರ ನಡುವೆ ವೆಂಕಟೇಶನ್​ ಅವರ ಕಾರು ಚಾಲಕ ಮೋಹನ್ ತಲಕುಳಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದರ ಬೆನ್ನಲ್ಲೇ ಪೊಲೀಸರು ನಡೆಸಿ ತನಿಖೆ ಕೈಗೊಂಡಿದ್ದಾರೆ. ವೆಂಕಟೇಶನ್​ ಪತ್ನಿ ಭಾನುಮತಿ ತನ್ನ ಚಾಲಕ ಮೋಹನ್‌ನ ಸಹಾಯದಿಂದ ವೆಂಕಟೇಶನ್​ ವಿರುದ್ಧ ಹಲ್ಲೆಗೆ ಯೋಜನೆ ರೂಪಿಸಿದ್ದಳು ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲ ಬಿಜೆಪಿ ಮುಖಂಡ ವೈರಮುತ್ತು ಪೊಲೀಸರ ದಿಕ್ಕು ತಪ್ಪಿಸುವ ಸಲುವಾಗಿ ಪ್ರಕರಣಕ್ಕೆ ರಾಜಕೀಯ ಬಣ್ಣ ನೀಡಿರುವುದು ತನಿಖೆಯಲ್ಲಿ ಬಯಲಾಗಿದೆ.

ಇದಾದ ಬಳಿಕ ವೆಂಕಟೇಶನ್​ ಪತ್ನಿ ಭಾನುಮತಿ, ಕಾರು ಚಾಲಕ ಮೋಹನ್, ರಾಜ್‌ಕುಮಾರ್ ಹಾಗೂ ಬಿಜೆಪಿ ಮುಖಂಡ ವೈರಮುತ್ತು, ಕಾರ್ಯಕರ್ತರಾದ ಮಲೈಸಾಮಿ, ಆನಂದರಾಜ್‌ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ, ಈಗಾಗಲೇ ಎಲ್ಲ ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಮಧುರೈ ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಗಿದೆ.

ಇದನ್ನೂ ಓದಿ:ಮಂಗಳೂರಿನಲ್ಲಿ ಯುವಕನಿಗೆ ಚೂರಿ ಇರಿದ ನಾಲ್ವರ ಬಂಧನ - ಕಣ್ಣಿಗೆ ಖಾರದ ಪುಡಿ ಎರಚಿ ಸುಲಿಗೆ ಮಾಡಿದವರು ವಶಕ್ಕೆ

ABOUT THE AUTHOR

...view details