ರಿಷಿಕೇಶ (ಉತ್ತರಾಖಂಡ):ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾದರಿಯಲ್ಲಿಯೇ ಮೊದಲ ಬಾರಿಗೆ ಉತ್ತರಾಖಂಡದಲ್ಲೂ ಕ್ರಮ ಕೈಗೊಳ್ಳಲಾಗಿದೆ. ರೆಸಾರ್ಟ್ ರಿಷೆಪ್ಸನಿಸ್ಟ್ ಆಗಿದ್ದ ಯುವತಿಯ ಹತ್ಯೆ ಪ್ರಕರಣ ಸಂಬಂಧ ಬಂಧಿತ ಆರೋಪಿ, ಬಿಜೆಪಿ ನಾಯಕನ ಮಗನ ಒಡೆತನದ ರೆಸಾರ್ಟ್ ಅನ್ನು ಜೆಸಿಬಿ ಮೂಲಕ ನೆಲಸಮಗೊಳಿಸಲಾಗಿದೆ. ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಆದೇಶದಂತೆ ರಿಷಿಕೇಶದಲ್ಲಿ ರೆಸಾರ್ಟ್ ಕೆಡವಲಾಗಿದೆ.
ಕಳೆದ ಕೆಲವು ದಿನಗಳ ಹಿಂದೆ ರೆಸಾರ್ಟ್ನಲ್ಲಿ ರಿಷೆಪ್ಸನಿಸ್ಟ್ ಆಗಿದ್ದ 19 ವರ್ಷದ ಅಂಕಿತಾ ಭಂಡಾರಿ ಎಂಬ ಯುವತಿ ನಾಪತ್ತೆಯಾಗಿದ್ದಳು. ಬಳಿಕ ಯುವತಿಯ ಶವ ಸೆಪ್ಟೆಂಬರ್ 23ರಂದು ಪತ್ತೆಯಾಗಿದೆ. ಪ್ರಕರಣದಲ್ಲಿ ಹರಿದ್ವಾರದ ಬಿಜೆಪಿ ನಾಯಕ ವಿನೋದ್ ಆರ್ಯ ಅವರ ಪುತ್ರರಾದ ರೆಸಾರ್ಟ್ ಮಾಲೀಕ ಪುಲ್ಕಿತ್ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಯುವತಿಯನ್ನು ಕೊಂದ ಆರೋಪದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.